ಯೋಗಿ ವಿರುದ್ಧ ಎಚ್ಡಿಕೆ, ಡಿಕೆಶಿ ಒಳ ಒಪ್ಪಂದ!

By Suvarna Web DeskFirst Published Mar 21, 2018, 10:24 AM IST
Highlights

ರಾಜ್ಯ ರಾಜಕಾರಣದಲ್ಲಿ ಬದ್ಧ ಎದುರಾಳಿಗಳಂತಿರುವ ದಿಗ್ಗಜ ನಾಯಕರಿಬ್ಬರು ತಮ್ಮ ಸಮಾನ ಶತ್ರುವನ್ನು ಮಣಿಸಲು ತೆರೆಮರೆಯಲ್ಲಿ ಕೈಜೋಡಿಸುತ್ತಿರುವ ಕಾರಣದಿಂದಾಗಿ ‘ಬೊಂಬೆಗಳ ನಾಡು’ ಚನ್ನಪಟ್ಟಣ ಈ ಬಾರಿ ರಾಜ್ಯದ ಗಮನ ಸೆಳೆದಿದೆ.

ರಾಮನಗರ : ರಾಜ್ಯ ರಾಜಕಾರಣದಲ್ಲಿ ಬದ್ಧ ಎದುರಾಳಿಗಳಂತಿರುವ ದಿಗ್ಗಜ ನಾಯಕರಿಬ್ಬರು ತಮ್ಮ ಸಮಾನ ಶತ್ರುವನ್ನು ಮಣಿಸಲು ತೆರೆಮರೆಯಲ್ಲಿ ಕೈಜೋಡಿಸುತ್ತಿರುವ ಕಾರಣದಿಂದಾಗಿ ‘ಬೊಂಬೆಗಳ ನಾಡು’ ಚನ್ನಪಟ್ಟಣ ಈ ಬಾರಿ ರಾಜ್ಯದ ಗಮನ ಸೆಳೆದಿದೆ.

ಚಿತ್ರನಟರೂ ಆಗಿರುವ ಹಾಲಿ ಶಾಸಕ ಸಿ.ಪಿ. ಯೋಗೇಶ್ವರ್‌ ರಾಜಕಾರಣದಲ್ಲಿ ‘ಪಕ್ಷಾಂತರ ಹಕ್ಕಿ’ ಎಂದೇ ಕರೆಯಲ್ಪಡುತ್ತಾರೆ. ಆದರೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಕಳೆದ ಬಾರಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿ, ಕಾಂಗ್ರೆಸ್ಸಿನ ಸಹಸದಸ್ಯರಾಗಿ ಗುರುತಿಸಿಕೊಂಡಿದ್ದ ಅವರು, ಈ ಬಾರಿ ಬಿಜೆಪಿಗೆ ಹಾರಿದ್ದು, ಕ್ಷೇತ್ರದಲ್ಲಿ ‘ಕಮಲ’ ಅರಳಿಸಲು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅವರನ್ನು ಕ್ಷೇತ್ರದಲ್ಲೇ ಕಟ್ಟಿಹಾಕಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಒಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕುಮಾರಸ್ವಾಮಿ ಹಾಗೂ ಡಿಕೆಶಿ ನಡುವೆ ರಾಜಕೀಯ ವೈಷಮ್ಯವಿದೆ. ಆದರೆ ಯೋಗೇಶ್ವರ್‌ಗೆ ಪಾಠ ಕಲಿಸಲೇಬೇಕೆಂಬ ಕಾರಣಕ್ಕೆ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಶಾಸಕಿ ಹಾಗೂ ಕುಮಾರಸ್ವಾಮಿ ಪತ್ನಿ ಅನಿತಾ ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಜೆಡಿಎಸ್‌ನಲ್ಲಿದೆ. ಅನಿತಾ ಅಭ್ಯರ್ಥಿಯಾದರೆ ನಾಮ್‌ಕೇವಾಸ್ತೆ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕಿಳಿಸುವುದು, ಒಂದು ವೇಳೆ ಅನಿತಾ ಕಣಕ್ಕಿಳಿಯಲು ಸಾಧ್ಯವಾಗದೇ ಹೋದರೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಜೆಡಿಎಸ್‌ ಬೆಂಬಲಿಸುವುದು ಕುಮಾರಸ್ವಾಮಿ- ಡಿಕೆಶಿ ನಡುವಣ ಒಳ ಒಪ್ಪಂದದ ಸಾರ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನಿಂದ ಡಿಕೆಶಿ ಸೋದರ, ಸಂಸದ ಡಿ.ಕೆ. ಸುರೇಶ್‌ ಅಥವಾ ಅವರ ಸಹೋದರಿಯ ಪತಿ ಶರತ್‌ಚಂದ್ರ ಹೆಸರು ಕೇಳಿಬರುತ್ತಿವೆ.

click me!