ಕಾರವಾರದಲ್ಲಿ ಕಪ್ಪು ಇರುವೆಗಳು ಕಚ್ಚಿ ಅಂಗವಿಕಲ ಸಾವು

By Suvarna Web DeskFirst Published Nov 4, 2017, 8:45 PM IST
Highlights

ಮೃತನ ತಾಯಿ ಕಮಲಾ ಅವರು ಹೋಟೆಲ್‌ವೊಂದರಲ್ಲಿಕೆಲಸ ಮಾಡುತ್ತಿದ್ದು, ಬೈತಖೋಲದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡುಜೀವನ ಸಾಗಿಸುತ್ತಿದ್ದಾರೆ

ಕಾರವಾರ(ನ.04): ಕೈ, ಕಾಲು ಸ್ವಾಧೀನ ಕಳೆದುಕೊಂಡಿದ್ದ ಅಂಗವಿಕಲ ಯುವಕರೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆ ಕಪ್ಪು ಇರುವೆ ಕಡಿತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಕಾರವಾರದ ಬೈತಖೋಲದಲ್ಲಿ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ಶಿವು(19) ಮೃತ ಯುವಕ. ಶಿವು ಅವರ ಕೈ, ಕಾಲು ಸ್ವಾಧೀನ ಕಳೆದುಕೊಂಡಿದ್ದು ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ತುಳಸಿ ಹಬ್ಬಕ್ಕಾಗಿ ಮನೆಯಲ್ಲಿ ತಂದಿಟ್ಟಿದ್ದ ಕಬ್ಬಿಗೆ ಮುತ್ತಿಕೊಂಡಿದ್ದ ಕಪ್ಪಿರುವೆಗಳು ಪಕ್ಕದಲ್ಲೇ ಮಲಗಿದ್ದ ಶಿವು ಅವರಿಗೂ ಮುತ್ತಿಕೊಂಡು ಕಚ್ಚಿವೆ. ಯುವಕನ ಕೂಗು ಕೇಳಿ ಅಕ್ಕಪಕ್ಕದವರು ಸ್ಥಳಕ್ಕಾಗಮಿಸಿ ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಿವು ಅವರು ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಅಂತ್ಯಸಂಸ್ಕಾರಕ್ಕೂ ಹಣವಿಲ್ಲ: ಮೃತನ ತಾಯಿ ಕಮಲಾ ಅವರು ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೈತಖೋಲದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಪುತ್ರ ಶಿವು ಕೈಕಾಲು ಸ್ವಾಧೀನ ಕಳೆದುಕೊಂಡಿದ್ದರೆ, ಸಹೋದರಿ ಸಂಗೀತಾ ಕೂಡ ಅಂಗವಿಕಲೆ. ಕುಟುಂಬ ತೀರಾ ಬಡತನದಲ್ಲಿರುವುದರಿಂದ, ಶಿವು ಅಂತ್ಯಸಂಸ್ಕಾರಕ್ಕೂ ಹಣವಿಲ್ಲದ ಸ್ಥಿತಿ ಇತ್ತು. ವಿಷಯ ತಿಳಿದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್, ಸ್ಥಳೀಯರಾದ ವಿಲ್ಸನ್ ಫರ್ನಾಂಡಿಸ್ ಅಂತಿಮ ಸಂಸ್ಕಾರಕ್ಕೆ ನೆರವಾದರು. ಡಿಎಫ್‌ಒ ಗಣಪತಿ ಕೆ. ಉಚಿತ ಕಟ್ಟಿಗೆ ವ್ಯವಸ್ಥೆ ಮಾಡಿಕೊಟ್ಟರು

click me!