
ಬೆಂಗಳೂರು (ಆ. 09): ನಮಗೆ ನಗರ ಪೊಲೀಸ್ ಆಯುಕ್ತ ಹುದ್ದೆ ಕೊಡಿಸುವಂತೆ ವ್ಯಕ್ತಿಯೊಬ್ಬರೊಂದಿಗೆ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮಾತನಾಡಿದ್ದರು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಪ್ರಕರಣದ ಸಮಗ್ರ ತನಿಖೆ ಕುರಿತು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಡಿಜಿಪಿ ನೀಲಮಣಿ ರಾಜು ಅವರು ಸೂಚಿಸಿದ್ದಾರೆ.
ಆರು ತಿಂಗಳ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೇಂದ್ರದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಜತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಅಹ್ಮದ್ ಪಟೇಲ್‌ನ ಆಪ್ತನ ಬಳಿ ‘ಅಹ್ಮದ್ ಪಟೇಲ್ ಅವರ ಜತೆ ಮಾತನಾಡಿ ನನಗೆ ನಗರ ಪೊಲೀಸ್ ಆಯುಕ್ತ ಹುದ್ದೆ ಕೊಡಿಸಲು ವ್ಯವಸ್ಥೆ ಮಾಡಿ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಜೆಡಿಎಸ್ ಪರ ಇರುವ ಅಧಿಕಾರಿಗಳನ್ನೇ ಎಲ್ಲೆಡೆ ನೇಮಕ ಮಾಡಲಾಗಿದೆ.
ಪ್ರಸ್ತುತ ನಗರ ಪೊಲೀಸ್ ಆಯುಕ್ತರು (ಹಿಂದಿನ ಆಯುಕ್ತ) ನನಗಿಂತ ಜೂನಿಯರ್ ಆಗಿದ್ದಾರೆ. ಅಲ್ಲದೆ, ಅವರ ಮೇಲೆ ಒಂದಂಕಿ ಲಾಟರಿ ಪ್ರಕರಣ ಆರೋಪ ಇದ್ದು, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ನಗರ ಪೊಲೀಸ್ ಆಯುಕ್ತ ಹುದ್ದೆಯಲ್ಲಿ ಒಂದು ವರ್ಷ ಇದ್ದು, ನಂತರ ಪೊಲೀಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್‌ನಿಂದ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ಇದೆ.
ಈ ಬಗ್ಗೆ ಅಹ್ಮದ್ ಪಟೇಲ್ ಅವರ ಬಳಿ ಮಾತನಾಡಿ’ ಎಂದು ಅಧಿಕಾರಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿ ‘ನಾನು ಅಹ್ಮದ್ ಪಟೇಲ್ ಅವರ ಬಳಿ ಮಾತನಾಡುತ್ತೇನೆ. ನಿಮಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದು ಹೇಳುವ ಆಡಿಯೋ ವೈರಲ್ ಆಗಿದೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ‘ಆಡಿಯೋ ವೈರಲ್ ಆಗಿರುವ ಸಂಬಂಧ ಸಮಗ್ರ ತನಿಖೆ ಕುರಿತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಸೂಚಿಸಲಾಗಿದೆ. ತನಿಖೆ ನಡೆಸಿ ವರದಿ ನೀಡಲಿದ್ದಾರೆ’ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.