
ಪಂಚರಾಜ್ಯಗಳ ಚುನಾವಣೆ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಒನ್‌ಮ್ಯಾನ್ ಶೋ ಆಗಿದ್ದು, ನಮ್ಮನ್ನು ಯಾರಿಂದಲೂ ವಾಶ್‌ಔಟ್ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ನನಗೆ ದಿಗ್ಭ್ರಮೆಯಾಗಿಲ್ಲ. ಪ್ರಧಾನಿ ಮೋದಿ ಒನ್‌ಮ್ಯಾನ್ ಶೋ ಐದು ರಾಜ್ಯಗಳ ಚುನಾವಣೆಯಲ್ಲಿ ಕೆಲಸ ಮಾಡಿದೆ. ಸಾಮಾನ್ಯವಾಗಿ ಪ್ರಧಾನಿಗಳು ಚುನಾವಣೆ ವೇಳೆ ರೋಡ್ ಶೋ ಮಾಡುವುದಿಲ್ಲ. ಮೂರು ದಿನ ರೋಡ್ ಶೋ ಮಾಡಿದ್ದು, 2014ರಲ್ಲಿ ಕೊಟ್ಟಭರವಸೆ ಈಡೇರಿಸಿಲ್ಲ. ಹೀಗಾಗಿ ರೋಡ್ ಶೋ ಮಾಡಿದ್ದಾರೆ. ಈಗ ಮತ್ತು ಹಿಂದೆ ನೀಡಿದ ಭರವಸೆ ಈಡೇರಿಸಿದರೆ ಮಾತ್ರ 2019ಕ್ಕೆ ಮೊದಿ ಅವರನ್ನು ಜನರು ಬೆಂಬಲಿಸಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಪಕ್ಷದ ಮೇಲೆ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷವನ್ನು ಅಳಿಸಲಾ ಗುವುದಿಲ್ಲ. ಪಕ್ಷವನ್ನು ಮುಗಿಸುವ ಷಡ್ಯಂತ್ರ ಮಾಡಲಾಗಿದ್ದು, ನಮ್ಮನ್ನು ಯಾರಿಂದಲೂ ವಾಶೌಟ್ ಮಾಡಲು ಸಾಧ್ಯವಿಲ್ಲ ಎಂದ ಹೇಳಿದ ಅವರು, ಸಮಾಜವಾದಿ ಪಕ್ಷದಲ್ಲಿನ ಒಳಜಗಳವೇ ಈ ಫಲಿತಾಂಶಕ್ಕೆ ಕಾರಣ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದು ತಪ್ಪಾಗಿದೆ ಎಂದು ಸಮಾಜವಾದಿಯವರೇ ಒಪ್ಪಿಕೊಂಡಿದ್ದಾರೆ. ಮತಯಂತ್ರದಲ್ಲಿ ದೋಷ ಇತ್ತು ಎನ್ನುವ ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ದೇವೇಗೌಡರು, ಸೋತ ಮೇಲೆ ಹೀಗೆಲ್ಲ ಸಬೂಬು ಹೇಳಬಾರದು ಎಂದು ಕಟುವಾಗಿ ನುಡಿದರು.
ಪಂಜಾಬ್, ಗೋವಾದಲ್ಲಿ ಏನಾಯ್ತು?: ಫಲಿತಾಂಶದಿಂದ ರಾಜ್ಯ ಬಿಜೆಪಿ ಬೀಗುತ್ತಿದೆ. ಆದರೆ, ಪಂಜಾಬ್ ಮತ್ತು ಗೋವಾದಲ್ಲಿ ಬಿಜೆಪಿ ಕಥೆ ಏನಾಯ್ತು? ಮುಖ್ಯಮಂತ್ರಿ ಲಕ್ಷ್ಮೇಕಾಂತ್ ಪರ್ಸೇಕರ್ ಸೋಲು ಅನುಭವಿಸಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿ ವಿರೋಧ ಅಲೆ ಇದೆ ಎಂಬುದನ್ನು ತೋರಿಸುತ್ತದೆ. ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ರೈತರ ಸಾಲ ಮನ್ನಾ ಮಾಡುವು ದಾಗಿ ಹೇಳಿಕೆ ನೀಡಿದ್ದಾರೆ. ನುಡಿದಂತೆ ನಡೆದುಕೊಳ್ಳುವರೇ ಎಂಬು ದನ್ನು ಕಾದು ನೋಡಬೇಕಿದೆ ಎಂದರು.
ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿಯ ದೆಹಲಿ ಮುಖಂಡರ ದೃಷ್ಟಿ2018ರ ಚುನಾವಣೆ ಮೇಲೆ ಬೀಳಲಿದೆ. ಅಲ್ಲದೇ, ಫಲಿತಾಂಶವು ಬಿಜೆಪಿಗೆ ಹೊಸ ಹುರುಪು ತಂದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸಲಿದ್ದಾರೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಜಯದ ಭರದಲ್ಲಿ ಸಂಸತ್ತಿನಲ್ಲಿ ಏನೇನು ನಡೆಯತ್ತೋ ಗೊತ್ತಿಲ್ಲ. ನಾನು ಅಲ್ಲಿ ಫೈಟ್ ಮಾಡಲಾಗುತ್ತದೆಯೋ ಗೊತ್ತಿಲ್ಲ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಜನರನ್ನು ಸೆಳೆಯಲು ಯಾವ ಘೋಷಣೆ ಮಾಡುತ್ತಾರೆ ನೋಡಬೇಕು. ನಾವೇನು ಮಾಡಲು ಸಾಧ್ಯ?. ರಾಜ್ಯ ಪ್ರವಾಸ ಕೈಗೊಂಡು ರೈತರ ಪರ ಹೋರಾಟ ಮುಂದುವರಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಾದೇಶಿಕ ಪಕ್ಷಕ್ಕೆ ನೆಲೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗೌಡರು, ಜನ ಮತ್ತು ಮಾಧ್ಯಮ ಅದನ್ನು ತೀರ್ಮಾನಿಸಲಿದೆ. ಪ್ರಾದೇಶಿಕ ಪಕ್ಷದಲ್ಲಿ ಏಳು ಬೀಳು ಇರಬಹುದು. ಆದರೆ ಮುಗಿಸಲು ಸಾಧ್ಯವಿಲ್ಲ. ಕಳೆದ 10 ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರಿಷ್ಮಾ ಕೆಡಿಸಲು ಸಾಧ್ಯವಾಗಿಲ್ಲ. ಆರೋಗ್ಯ ನೋಡಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲಿ ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.