
ನವದೆಹಲಿ(ಜ.06): ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂಡಿಯಾ ಟಿವಿಯ ರಜತ್ ಶರ್ಮಾ ನಡೆಸಿ ಕೊಡುವ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಪಾಲ್ಗೊಂಡಿದ್ದು, ರಕ್ಷಣಾ ಇಲಾಖೆ, ರಫೆಲ್ ಒಪ್ಪಂದ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಮಾತನಾಡಿದ್ದಾರೆ.
ಪ್ರಮುಖವಾಗಿ ರಕ್ಷಣಾ ಇಲಾಖೆ ಮತ್ತು ಭಾರತೀಯ ಸೇನೆಯ ಪ್ರಸಕ್ತ ಸ್ಥಿತಿಗತಿ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ, ಸೈನಿಕ ನೆಲೆಗಳ ಮೇಲೆ ನಿರಂತರ ದಾಳಿ, ಸರ್ಜಿಕಲ್ ಸ್ಟ್ರೈಕ್ ಮೂಲಕ ದಿಟ್ಟ ಉತ್ತರ ಕುರಿತು ಮಾತನಾಡಿದ ಅವರು, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಸೇನೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಶ್ವಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿದೆ. ಒಂದು ಕಡೆ ಸೇನೆ ತನ್ನ ಕರ್ತವ್ಯ ಮಾಡುತ್ತಿದ್ದು, ಮತ್ತೊಂದು ಕಡೆ ಸರ್ಕಾರ ಪಾಕಿಸ್ತಾನದ ನಿಜ ಮುಖವನ್ನು ಜಗತ್ತಿನ ಮುಂದೆ ತೆರೆದಿಡುವಲ್ಲಿ ನಿರತವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸೇನೆ ಆಧುನಿಕರಣ ಯಾವಾಗ?:
ಈ ವೇಳೆ ಸೇನೆಯನ್ನು ಆಧುನಿಕರಣಗೊಳಿಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರಕ್ಷಣಾ ಸಚಿವೆ, ಸೇನೆಯನ್ನು ಮತ್ತಷ್ಟು ಬಲಾಢ್ಯಗೊಳಿಸಲು ಸರ್ಕಾರ ಹಂತ ಹಂತವಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ಪ್ರಮುಖವಾಗಿ ಆಧುನಿಕ ಶಸ್ತ್ರಾಸ್ತ್ರಗಳು, ಬುಲೆಟ್ ಪ್ರೂಫ್ ಜಾಕೆಟ್ ಇತರ ಆಧುನಿಕ ಉಪಕರಣಗಳ ಖರೀದಿಗೆ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಚೀನಾ ಸೇನೆ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಮಲಾ, ಗಡಿ ವಿಚಾರವಾಗಿ ಇರುವ ತಂಟೆ ತಕರಾರುಗಳಿಂದಾಗಿ ಪದೇ ಪದೇ ಈ ಸಮಸ್ಯೆ ಎದುರಾಗುತ್ತಿದೆ. ಅಸಲಿಗೆ ನೈಜ ಗಡಿ ಕುರಿತು ಭಾರತ ಮತ್ತು ಚೀನಾ ನಡುವೆ ಸ್ಪಷ್ಟತೆಯೇ ಇಲ್ಲವಾಗಿದೆ ಎಂದು ಅವರು ಹೇಳಿದರು.
ಇನ್ನು ಪ್ರಮುಖವಾಗಿ ರಫೆಲ್ ಒಪ್ಪಂದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟ ರಕ್ಷಣಾ ಸಚಿವೆ, ವಾಯುಸೇನೆಯನ್ನು ಬಲಾಢ್ಯಗೊಳಿಸಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸರ್ಕಾರ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ರಫೆಲ್ ಒಪ್ಪಂದದ ಕುರಿತು ಮತ್ತು ಯುದ್ಧ ವಿಮಾನದ ಅಸಲಿ ಬೆಲೆಗಳ ಕುರಿತು ನಿರ್ಮಲಾ ತಮ್ಮ ವಾದ ಮುಂದಿರಿಸಿದರು.
ಹೆಚ್‌ಎಲ್ ಯಾಕಿಲ್ಲ?:
ಇನ್ನು ರಫೆಲ್ ಯುದ್ಧ ವಿಮಾನ ತಯಾರಿಸಲು ಹೆಚ್‌ಎಎಲ್ ಬದಲಾಗಿ ಅನಿಲ್ ಅಂಬಾನಿ ಅವರ ಖಾಸಗಿ ಕಂಪನಿಗೆ ನೀಡಿದ್ದರ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, ಡಸಾಲ್ಟ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಯುಪಿಎ ಸರ್ಕಾರ ಯಾಕೆ ಹೆಚ್‌ಎಎಲ್ ವಿಮಾನ ತಯಾರಿಸಲಿದೆ ಎಂದು ಯಾಕೆ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲದೇ ಹೆಚ್‌ಎಎಲ್ ಗೆ 2014 ರ ನಂತರ ವಾರ್ಷಿಕವಾಗಿ 22 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಆಪ್ ಕಿ ಅದಾಲತ್ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.