
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ದುಷ್ಕರ್ಮಿಗಳ ಬೆದರಿಕೆ ಕರೆ ಪ್ರಕರಣ ಮುಂದುವರೆದಿದ್ದು, ಈಗ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರಿಗೆ ವ್ಯಾಟ್ಸ್ ಆ್ಯಪ್‌ನಲ್ಲಿ ಕಿಡಿಗೇಡಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಇಬ್ರಾಹಿಂ, ಕಿಡಿಗೇಡಿ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ ಅವರು, ನನಗೆ ರವಿ ಪೂಜಾರಿ ಯಾರೂ ಎಂಬುದು ಗೊತ್ತಿಲ್ಲ. ಕೊಲ್ಲುವುದಾಗಿ ಆತನ ಹೆಸರಿನಲ್ಲಿ ವ್ಯಾಟ್ಸ್ ಆ್ಯಪ್ ಮೂಲಕ ನನಗೆ ಬೆದರಿಕೆ ಸಂದೇಶ ಬಂದಿದೆ. ಇದುವರೆಗೆ ನಾನು ರವಿ ಪೂಜಾರಿ ಜತೆ ಮಾತನಾಡಿಲ್ಲ. ಈ ಬೆದರಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ತನಿಖೆಗೆ ಕೋರಿದ್ದೇನೆ ಎಂದರು.
ಇಬ್ರಾಹಿಂ ಅವರಿಗೆ ನಿನ್ನ ಭಾಷೆ ಮೇಲೆ ಹಿಡಿತವಿರಲಿ. ದೇಶದ ಬಗ್ಗೆ ಅಗೌರವಯುತವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ -ಮಾಫಿಯಾ ಡಾನ್ ರವಿ ಪೂಜಾರಿ ಎಂಬ ಸಂದೇಶ ಬಂದಿದೆ. ಇದೇ ರೀತಿ ಬೆದರಿಕೆ ಕರೆಗಳು ಕಾಂಗ್ರೆಸ್ ನಾಯಕರಾದ ರಮಾನಾಥ ರೈ, ಡಿ.ಕೆ.ಸುರೇಶ್, ಎಚ್. ಎಂ.ರೇವಣ್ಣ ಅವರಿಗೂ ರವಿ ಪೂಜಾರಿ ಹೆಸರಿನಲ್ಲಿ ಬಂದಿದ್ದವು. ಅಲ್ಲದೆ, ಕೆಲ ದಿನಗಳ ಹಿಂದೆ ಗುಜರಾತ್ ಶಾಸಕ, ದಲಿತ ಪರ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರಿಗೂ ಪೂಜಾರಿ ಬೆದರಿಕೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಈ ಪಟ್ಟಿಗೆ ಇಬ್ರಾಹಿಂ ಸಹ ಸೇರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.