
ಮೂಡಿಗೆರೆ : ಅನಾರೋಗ್ಯದಿಂದ ನಿಧನರಾದ ವೃದ್ಧೆಯೊಬ್ಬರ ಶವವನ್ನು ತೆಪ್ಪದ ಮೂಲಕವೇ ಅವರ ಮನೆಗೆ ಸಾಗಿಸಿದ ಮನಕುಲಕುವ ಪ್ರಸಂಗ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಮ್ಮ (70) ಎಂಬುವವರ ಮೃತದೇಹವನ್ನು ಅಂತಿಮಸಂಸ್ಕಾರಕ್ಕಾಗಿ ಸ್ವಗ್ರಾಮಕ್ಕೆ ತೆಪ್ಪದ ಮೂಲಕ ಸಾಗಿಸಲಾಯಿತು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಲಕ್ಷ್ಮಮ್ಮ ಅವರನ್ನು ಈ ಹಿಂದೆ ತೆಪ್ಪದಲ್ಲೇ ಕರೆದೊಯ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಸ್ವಗ್ರಾಮಕ್ಕೆ ಒಯ್ಯಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಹೀಗಾಗಿ, ಗ್ರಾಮಸ್ಥರು ಎಲ್ಲಿಗೆ ಹೋದರೂ ಭದ್ರಾ ನದಿ ದಾಟಿಕೊಂಡೇ ಹೋಗಬೇಕು. ಅದೇ ರೀತಿ ಗ್ರಾಮಸ್ಥರು ತೆಪ್ಪದಲ್ಲೇ ವೃದ್ಧೆಯ ಮೃತದೇಹವನ್ನು ಅವರ ಮನೆಗೆ ಸಾಗಿಸಿದ್ದಾರೆ.
ಕೊವೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹೊಳೆಕೊಡಿಗೆ ಗ್ರಾಮದಲ್ಲಿ ಆದಿವಾಸಿ ಜನಾಂಗದ 6 ಕುಟುಂಬ ವಾಸಿಸುತ್ತಿವೆ. ಈ ಗ್ರಾಮಸ್ಥರು ಮಾಗುಂಡಿ ಹಾಗೂ ಬಾಳೆಹೊನ್ನೂರು ಅಥವಾ ಮೂಡಿಗೆರೆ ಹೋಗಬೇಕಾದರೆ, ನದಿಗೆ ಸೇತುವೆ ಇಲ್ಲದ ಕಾರಣ ತೆಪ್ಪವೇ ಆಧಾರವಾಗಿದೆ. ಗ್ರಾಮಕ್ಕೆ ರಸ್ತೆ ಇದ್ದರೂ, ಕಾಫಿ ಎಸ್ಟೇಟಿನ ಮಾಲೀಕರು ಅದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ, ಗ್ರಾಮಸ್ಥರೆಲ್ಲ ತೆಪ್ಪದ ಮೂಲಕ ನದಿ ದಾಟಿಯೇ ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಬೇಕು. ಮಳೆಗಾಲದಲ್ಲಂತೂ ಭದ್ರಾ ನದಿ ಉಕ್ಕಿ ಹರಿಯುವುದರಿಂದ ಗ್ರಾಮಸ್ಥರು ಪ್ರಾಣಭಯದಿಂದಲೇ ಓಡಾಡುವ ಪರಿಸ್ಥಿತಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.