ಹಳೆಯ ರೇಪ್ ವಿಡಿಯೋ ಪೋಸ್ಟ್: ಮಹಿಳಾ ಆಯೋಗ ಮುಖ್ಯಸ್ಥೆ ಎಡವಟ್ಟು| ಮೂರು ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಘಟನೆಯನ್ನು ದೆಹಲಿಯಲ್ಲಿ ನಡೆದಿದೆ ಎಂದು ಬಿಂಬಿಸಿ ಪೋಸ್ಟ್
ನವದೆಹಲಿ[ಜು.24]: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಹಳೆಯ ರೇಪ್ ವಿಡಿಯೋವೊಂದನ್ನು ಮಂಗಳವಾರ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಘಟನೆಯನ್ನು ದೆಹಲಿಯಲ್ಲಿ ನಡೆದಿದೆ ಎಂದು ಬಿಂಬಿಸಿ ಪೋಸ್ಟ್ ಮಾಡಿದ್ದರು.
ನೆಟ್ಟಿಗರಿಂದ ತರಾಟೆಗೆ ಒಳಗಾದ ಮೇಲೆ ತಪ್ಪು ಅರಿತು ಪೋಸ್ಟ್ ಖಾತೆಯಿಂದ ಅಳಿಸಿ ಹಾಕಿದ್ದಾರೆ. ಸ್ವಾತಿ ಮಲಿವಾಲ್ ಅವರು, ‘ನೋಡಿ, ಮೊಮ್ಮಗಳ ವಯಸ್ಸಿನ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದು, ಇಂತಹ ವಿಕೃತರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ವಿಡಿಯೋದೊಂದಿಗೆ ಬರೆದುಕೊಂಡಿದ್ದರು. ಅಲ್ಲದೆ ಈ ಕುರಿತು ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದರು.
ಈ ಪೋಸ್ಟ್‌ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ಕ್ರೂರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದಿದ್ದರೆ, ಇನ್ನು ಕೆಲವರು ಇಂತಹ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಡಿ ಎಂದು ಸಲಹೆ ನೀಡಿದ್ದರು.