
ಚಿಕ್ಕಮಗಳೂರು(ನ.17) : ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನದ ಬೆನ್ನಲ್ಲೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ನ.23 ರಿಂದ ಡಿ.3 ರವರೆಗೆ ದತ್ತಜಯಂತಿ ಅಭಿಯಾನ ಹಮ್ಮಿಕೊಂಡಿವೆ. ಇದರ ಜತೆಗೆ ಇದೇ ಪ್ರಥಮ ಬಾರಿಗೆ ದತ್ತ ರಥಯಾತ್ರೆ ಹೊಸ ಕಾರ್ಯಕ್ರಮ ಕೂಡಾ ಸೇರ್ಪಡೆಗೊಂಡಿದೆ.ದತ್ತ ಜಯಂತಿ ಅಭಿಯಾನ ಕುರಿತು ಗುರುವಾರ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್‌ವೇಲ್, ಸ್ಕಂದ ಪಂಚಮಿ ದಿನದಂದು (ನ.೨೩) ರಾಜ್ಯಾದ್ಯಂತ ಬಜರಂಗದಳ ಕಾರ್ಯಕರ್ತರು, ಅಂದು ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಭಕ್ತರು ದತ್ತಮಾಲೆ ಧರಿಸಿ, 11 ದಿನಗಳ ಕಾಲ ಕಠಿಣ ವ್ರತ ಆಚರಿಸಲಿದ್ದಾರೆ ಎಂದು ತಿಳಿಸಿದರು. ಡಿ.1 ರಂದು ಅನುಸೂಯ ಜಯಂತಿ ನಡೆಯಲಿದ್ದು, ಬೋಳರಾಮೇಶ್ವರ ದೇವಸ್ಥಾನದಿಂದ ಹೊರಟು ಪ್ರಮುಖ ರಸ್ತೆಯ ಮೂಲಕ ಮಹಿಳೆಯರು ಟೌನ್ ಕ್ಯಾಂಟಿನ್'ವರೆಗೆ ತೆರಳಿ ನಂತರ ದತ್ತಪೀಠಕ್ಕೆ ತೆರಳಲಿದ್ದಾರೆ. ಪೀಠದಲ್ಲಿ ವಿಶೇಷ ಗಣಪತಿ ಹೋಮ, ಹಿಂದೂ ಸಂಸ್ಕೃತಿಯ ಪ್ರತೀಕ ವಾದ ಅರಿಶಿನ ಕುಂಕುಮ, ಬಳೆಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದರು.
ಡಿ. 2 ರಂದು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ದತ್ತ ಸಂಕೀರ್ತನಾ ಯಾತ್ರೆಗಳು ಮತ್ತು ಶೋಭಾಯಾತ್ರೆಗಳು ನಡೆಯಲಿವೆ. ಅಂದೇ ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಿಂದ ಮಧ್ಯಾಹ್ನ 2 ಗಂಟೆಗೆ ಶೋಭಾಯಾತ್ರೆ ಹೊರಡಲಿದ್ದು, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆಯ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಲಿದೆ.
ನಂತರದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೋಹನ್ ಸಿಂಗ್ ಸೋಲಂಕಿಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಿ. 3 ರಂದು ಹೊನ್ನಮ್ಮನಹಳ್ಳದಲ್ಲಿ ದತ್ತಭಕ್ತರು ಸ್ನಾನ ಮಾಡಿ ಸಂಕೀರ್ತನಾ ಯಾತ್ರೆಯ ಮೂಲಕ ದತ್ತಪೀಠಕ್ಕೆ ತೆರಳಿ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಈ ಬಾರಿ ರಾಜ್ಯದ ವಿವಿಧೆಡೆಯಿಂದ ಸುಮಾರು 30 ಸಾವಿರ ದತ್ತಭಕ್ತರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಯೋಗೀಶ್ ರಾಜ್ ಅರಸ್ ಮಾತನಾಡಿ, ದತ್ತ ಪೀಠದ ಹೋರಾಟ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ದತ್ತ ರಥಯಾತ್ರೆ ಆಯೋಜಿಸಲಾಗಿದೆ. ಯಾತ್ರೆ ನ. 24 ರಂದು ಹೊರನಾಡಿನಿಂದ ಹೊರಟು ಜಿಲ್ಲೆಯ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಡಿ. 2 ರಂದು ಚಿಕ್ಕಮಗಳೂರು ನಗರ ಪ್ರವೇಶ ಮಾಡಲಿದೆ ಎಂದು ಹೇಳಿದರು.
ಧರ್ಮ ಸಂಸತ್: ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ನ. 25 ಮತ್ತು 26 ರಂದು ಉಡುಪಿಯಲ್ಲಿ ಧರ್ಮಸಂಸತ್ ನಡೆಯಲಿದ್ದು, ಇದರಲ್ಲಿ ರಾಜ್ಯದ ಸುಮಾರು 1000 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಶರಣ್ ಪಂಪ್'ವೇಲ್ ಹೇಳಿದರು.
ಧರ್ಮ ಸಂಸತ್'ನಲ್ಲಿ ದತ್ತಪೀಠ ವಿಷಯ ಕುರಿತು ಚರ್ಚಿಸಬೇಕೆಂದು ಗುರುಗಳನ್ನು ಕೋರಲಾಗಿದೆ. ಅಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡು, ದತ್ತಪೀಠ ಹಿಂದೂ ಗಳಿಗೆ ಒಪ್ಪಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು. ಆಯೋಧ್ಯೆ ರಾಮ ಜನ್ಮ ಭೂಮಿಗೆ ಸಂಬಂಧಿಸಿದಂತೆ 1992ರ ಡಿಸೆಂಬರ್ 6 ರಂದು ಹಿಂದೂ ಸಮಾಜದ ತಾಕತ್ತು ಏನೆಂಬುದನ್ನು ತೋರಿಸಿದ್ದೇವೆ. ಆ ದಿನವನ್ನು ಶೌರ್ಯ ದಿನವನ್ನಾಗಿ ಆಚರಿಸಲು ಸಂಘಟನೆ ಕರೆ ನೀಡಿದೆ.
ಅಂದು ಜಿಲ್ಲಾಮಟ್ಟದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಬಜರಂಗದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ಜಿಲ್ಲಾ ಸಂಯೋಜಕ ಮಂಜುನಾಥ್ ತುಡುಕೂರು, ಮುಖಂಡರಾದ ಶಿವಶಂಕರ್, ರಂಗನಾಥ್ ಉಪಸ್ಥಿತರಿದ್ದರು. ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ, ದತ್ತಜಯಂತಿ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಬುಧವಾರ ದತ್ತಪೀಠಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಯ ಬಗ್ಗೆ ಪರಿಶೀಲಿಸಿತು. ಡಿಸಿ ಶ್ರೀರಂಗಯ್ಯ, ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾ ಮಲೈ ಬರುವ ಭಕ್ತಾ ಧಿಗಳಿಗೆ ಕುಡಿವ ನೀರು, ಶೌಚಾಲಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಕಳೆದ ಬಾರಿ ಉದ್ದನೆಯ ಬಸ್'ಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಆಗಿತ್ತು.ಇದರಿಂದಾಗಿ ಭಕ್ತಾಧಿಗಳು ದಾರಿ ಮಧ್ಯದಲ್ಲೇ ಗಂಟೆ ಗಟ್ಟಲೆ ನಿಲ್ಲುವಂತಾಯಿತು. ಈ ಬಾರಿ ಇಂಥ ಸಮಸ್ಯೆ ಮರುಕಳಿಸ ಬಾರದೆಂಬ ಉದ್ದೇಶದಿಂದ ಕೈಮರ ದಲ್ಲೇ ಉದ್ದನೆಯ ಚಾಸ್ಸಿ ಬಸ್ಸು ಗಳನ್ನು ನಿಲುಗಡೆ ಮಾಡಿ, ಅಲ್ಲಿಂದ ದತ್ತಪೀಠಕ್ಕೆ ತೆರಳುವ ಭಕ್ತರಿಗೆ ಕಡಿಮೆ ದರದಲ್ಲಿ ಬಸ್ ವ್ಯವಸ್ಥೆ ಮಾಡಲು ಆರ್'ಟಿಓ, ಕೆಎಸ್'ಆರ್'ಟಿಸಿ ಅಧಿಕಾರಿಗಳಿಗೆ ಸೂಚಿಸಲಾಯಿತು. ನಿರ್ಮಿತಿ ಕೇಂದ್ರ, ಲೋಕೋಪಯೋಗಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.