8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಎಂಜಿನಿಯರ್ ದುರ್ಮರಣ : ದೇಹ ಛಿದ್ರ

By Web DeskFirst Published Dec 6, 2018, 8:52 AM IST
Highlights

ಭಾರತೀಯ ವಿಜ್ಞಾನ ಸಂಸ್ಥೆ  ಆವರಣದ ಪ್ರಯೋಗಾಲಯದಲ್ಲಿ ಬುಧವಾರ ಆಕಸ್ಮಿಕವಾಗಿ ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಸಂಶೋಧನಾ ನಿರತ ಎಂಜಿನಿಯರ್‌ವೊಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬೆಂಗಳೂರು :  ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ ‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)’ ಆವರಣದ ಪ್ರಯೋಗಾಲಯದಲ್ಲಿ ಬುಧವಾರ ಆಕಸ್ಮಿಕವಾಗಿ ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ಸಂಶೋಧನಾ ನಿರತ ಎಂಜಿನಿಯರ್‌ವೊಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದಿದೆ.

ಬಾಹ್ಯಾಕಾಶ ಸಂಶೋಧನಾ ವಿಭಾಗದ ಪ್ರಯೋಗಾಲಯದಲ್ಲಿ ಮಧ್ಯಾಹ್ನ ಸುಮಾರು 2.30ರಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸಂಶೋಧನಾ ನಿರತ ಎಂಜಿನಿಯರ್‌, ಮೈಸೂರು ಮೂಲದ ಪಿ.ಮನೋಜ್‌ ಕುಮಾರ್‌ (32) ಸಾವನ್ನಪ್ಪಿದ್ದಾರೆ. ಸ್ಫೋಟದ ರಭಸಕ್ಕೆ ಮನೋಜ್‌ ದೇಹ ಛಿದ್ರ ಛಿದ್ರವಾಗಿತ್ತು. ಅವಘಡದಲ್ಲಿ ಎಂಜಿನಿಯರ್‌ಗಳಾದ ನರೇಶ್‌ ಕುಮಾರ್‌, ಅತುಲ್ಯ ಹಾಗೂ ಕಾರ್ತಿಕ್‌ ಶೆಣೈ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಕೆಲ ದಿನಗಳಿಂದ ಐಐಎಸ್‌ಸಿಯ ಪ್ರೊ.ಜಗದೀಶ್‌ ಅವರ ಮಾರ್ಗದರ್ಶನದಲ್ಲಿ ಮನೋಜ್‌ ಕುಮಾರ್‌ ಸೇರಿದಂತೆ ನಾಲ್ವರು ಎಂಜಿನಿಯರ್‌ಗಳು, ಬಾಹ್ಯಾಕಾಶದಲ್ಲಿ ತರಂಗಗಳ ಸೃಷ್ಟಿಕುರಿತು ‘ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ ವೇವ್‌ ರಿಸಚ್‌ರ್‍’ ಪ್ರಯೋಗಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದರು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈಸೂರಿನ ಜೆಎಸ್‌ಎಸ್‌ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರಕಾಶ್‌ ಅವರ ಕಿರಿಯ ಪುತ್ರ ಮನೋಜ್‌ ಕುಮಾರ್‌ ಮೈಸೂರಿನಲ್ಲಿ ಮೆಕ್ಯಾನಿಕ್‌ ಅಂಡ್‌ ಎಲೆಕ್ಟ್ರಾನಿಕಲ್ಸ್‌ ವಿಷಯದಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. 8 ತಿಂಗಳ ಹಿಂದಷ್ಟೆಸಾಫ್ಟ್‌ವೇರ್‌ ಉದ್ಯೋಗಿ ಅನುಷಾ ಜತೆ ಮನೋಜ್‌ ವಿವಾಹವಾಗಿದ್ದರು. ಮೂರು ತಿಂಗಳಿಂದ ಪ್ರೊ.ಜಗದೀಶ್‌ ಸಾರಥ್ಯದಲ್ಲಿ ಸಂಬಂಧ ಸಂಶೋಧನೆಯಲ್ಲಿ ನಿರತರಾಗಿದ್ದರು.

click me!