ಆಗಸ್ಟ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷ?

By Web DeskFirst Published Jul 31, 2019, 8:06 AM IST
Highlights

ಆಗಸ್ಟ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷ?| ಮುಂದಿನ ತಿಂಗಳ ಮೊದಲ ವಾರದಲ್ಲೇ ಸಿಡಬ್ಲ್ಯುಸಿ ಸಭೆ| ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ| ಪಕ್ಷದ ಯುವ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಲು ಒಲವು| ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ವಾದ್ರಾ ಹೆಸರು ಮುಂಚೂಣಿಯಲ್ಲಿ

ನವದೆಹಲಿ[ಜು.31]: ಲೋಕಸಭಾ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ ಬಳಿಕ, ಕಾಂಗ್ರೆಸ್‌ಗೆ ಶೀಘ್ರವೇ ಹೊಸ ಅಧ್ಯಕ್ಷರ ನೇಮಕವಾಗಬೇಕೆಂಬ ಕೂಗು ಗಟ್ಟಿಯಾಗುತ್ತಿರುವ ಬೆನ್ನಲ್ಲೇ, ಈ ಕುರಿತಾದ ಮಹತ್ವದ ಚರ್ಚೆಗಾಗಿ ಆಗಸ್ಟ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ಪಕ್ಷದ ನೀತಿ-ನಿರೂಪಣೆ ಕೈಗೊಳ್ಳುವ ಸಿಡಬ್ಲ್ಯುಸಿ ಸಭೆ ಸೇರುವ ಸಾಧ್ಯತೆಯಿದೆ.

ಯುವ ನಾಯಕರೊಬ್ಬರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ಶೀಘ್ರವೇ ನೇಮಕ ಮಾಡಬೇಕೆಂಬ ಒತ್ತಡಗಳು ಪಂಜಾಬ್‌ ಸಿಎಂ ಕ್ಯಾ.ಅಮರೀಂದರ್‌ ಸಿಂಗ್‌, ಜನಾರ್ಧನ್‌ ದ್ವಿವೇದಿ, ಕರಣ್‌ ಸಿಂಗ್‌ ಸೇರಿದಂತೆ ಇನ್ನಿತರ ಸ್ವಪಕ್ಷೀಯ ನಾಯಕರಿಂದಲೇ ಹೆಚ್ಚಿದೆ. ಅಲ್ಲದೆ, ಮೇ 25ರಂದು ರಾಹುಲ್‌ ಗಾಂಧಿ ಅವರ ರಾಜೀನಾಮೆ ನಂತರ ಪಕ್ಷದಲ್ಲಿ ನಾಯಕತ್ವ ಬಿಕ್ಕಟ್ಟು ಎದುರಾಗಿದೆ ಎಂಬ ಗೊಂದಲಗಳು ಪಕ್ಷದ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಏತನ್ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸಂಘಟನಾ ಉಸ್ತುವಾರಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ಕೆ.ಸಿ ವೇಣುಗೋಪಾಲ್‌, ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ರಾಹುಲ್‌ ಗಾಂಧಿ ಅವರ ರಾಜೀನಾಮೆ ಸಿಡಬ್ಲ್ಯುಸಿಯಲ್ಲಿ ಅಂಗೀಕಾರವಾಗುವರೆಗೂ, ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಾಗಿ ಸಿಡಬ್ಲ್ಯುಸಿ ಸಭೆ ಆಗಸ್ಟ್‌ ಮೊದಲ ವಾರದಲ್ಲಿ ನಡೆಯಲಿದೆ ಎಂದಿದ್ದಾರೆ.

ಏತನ್ಮಧ್ಯೆ, ಜು.31ರ ಬುಧವಾರದಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ರಾಜ್ಯ ಉಸ್ತುವಾರಿಗಳ ಸಭೆಯನ್ನು ವೇಣುಗೋಪಾಲ್‌ ಕರೆದಿದ್ದು, ಈ ಸಭೆಯಲ್ಲಿ ದೇಶದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜಯಂತ್ಯೋತ್ಸವ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಗೆ ಪಕ್ಷದ ಸಿದ್ಧತೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಯಿದೆ.

ಈ ನಡುವೆ ನೂತನ ಅಧ್ಯಕ್ಷರ ಆಯ್ಕೆ ಕುರಿತು ಹಲವು ದಿನಗಳಿಂದ ನಡೆಯುತ್ತಿರುವ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಮುಂದಿನ ಅಧ್ಯಕ್ಷರು ಯಾರಾಗಬಹುದು ಎಂಬುದುರ ಬಗ್ಗೆ ಪ್ರತಿಯೊಬ್ಬರೂ ಲಿಖಿತ ಸ್ವರೂಪದಲ್ಲಿ ಹೆಸರು ಸೂಚಿಸಬೇಕು ಎಂದು ಸ್ವತಃ ಸೋನಿಯಾ ಗಾಂಧಿ ಸಿಡಬ್ಲುಸಿ ಸದಸ್ಯರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!