ಅ.2 ಒಳಗಾಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ಕೇಂದ್ರ ಸಲಹೆ

By Web DeskFirst Published Sep 19, 2019, 10:08 AM IST
Highlights

ಅ.2 ಒಳಗಾಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಿ: ರಾಜ್ಯಗಳಿಗೆ ಕೇಂದ್ರ ಸಲಹೆ| ಸರ್ಕಾರಿ, ಖಾಸಗಿ ಕಂಪನಿಗಳಲ್ಲೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ

ನವದೆಹಲಿ[ಸೆ.19]: ಗಾಂಧಿ ಜಯಂತಿಯ ದಿನವಾದ ಅ.2ರ ಒಳಗಾಗಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದನೆ, ಪ್ಲಾಸ್ಟಿಕ್‌ ಚಮಚ, ಚಾಕು ಮತ್ತಿತರ ವಸ್ತುಗಳು ಮತ್ತು ಥರ್ಮೊಕೋಲ್‌ನಿಂದ ಮಾಡಿದ ಅಲಂಕಾರಿಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

2022ರ ವೇಳೆಗೆ ದೇಶದಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಚೂರನ್ನೂ ಬಳಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಈ ಸಲಹೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸಲಹೆಯಲ್ಲಿ ಏನಿದೆ?

ಈ ತಿಂಗಳ ಆರಂಭದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೀಡಿರುವ ಸಲಹೆಯ ಪ್ರಕಾರ, ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ತಮ್ಮ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಉತ್ತೇಜನ ನೀಡಬಾರದು. ಕೃತಕ ಹೂವುಗಳು, ಬ್ಯಾನರ್‌ಗಳು, ಹೂವಿನ ಕುಂಡ, ನೀರಿನ ಬಾಟಲಿ ಹಾಗೂ ಪ್ಲಾಸ್ಟಿಕ್‌ ಸ್ಯಾನಿಟರಿ ಉತ್ಪನ್ನಗಳ ಬದಲು ಅವುಗಳಿಗೆ ಪರ್ಯಾಯವಾದ ವಸ್ತುಗಳನ್ನು ಬಳಕೆ ಮಾಡಬೇಕು.

ಅಲ್ಲದೇ ಎಲ್ಲಾ ಸಂಸ್ಥೆಗಳು ತಮ್ಮ ಕಚೇರಿಯ ಆವರಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬೇರ್ಪಡಿಸಲು ಉತ್ತೇಜನ ನೀಡಬೇಕು. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಸರ ಸ್ನೇಹಿ ಪರ್ಯಾಯ ವಸ್ತುಗಳ ಬಳಕೆಗೆ ಉತ್ತೇಜನ ನೀಡಬೇಕು. ಟೀವಿ. ರೇಡಿಯೋ ಹಾಗೂ ಇತರ ಮಾಧ್ಯಮಗಳ ಮೂಲಕ ಜಾಗೃತಿ ಮತ್ತು ನೈರ್ಮಲ್ಯ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಈ ಅಭಿಯಾನಕ್ಕೆ ರಾಯಭಾರಿಗಳಾಗಲು ಪ್ರಮುಖ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಬೇಕು. ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಶಾಲೆ- ಕಾಲೇಜುಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಲಾಗಿದೆ.

click me!