ಎಚ್ಚರಿಕೆ ಸಂದೇಶ ರವಾನಿಸಿದ ಶಾಸಕ ಸಿಟಿ ರವಿ

By Web DeskFirst Published Jun 27, 2019, 7:55 AM IST
Highlights

ಶಾಸಕ ಸಿಟಿ ರವಿ ಎಚ್ಚರಿಕೆ ಸಂದೇಶ ಒಂದನ್ನು ರವಾನಿಸಿದ್ದಾರೆ. ತಮಗೆ ನಿವೇಶನ ಮಂಜೂರು ಮಾಡದಿದ್ದಲ್ಲಿ ಧರಣಿ ಕೂರುವುದಾಗಿ ಹೇಳಿದ್ದಾರೆ.

ಬೆಂಗಳೂರು [ಜೂ.27] :  ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಅಡಿಯಲ್ಲಿ ತಮಗೆ ಮಂಜೂರಾಗಿದ್ದ ನಿವೇಶನಕ್ಕೆ ಬದಲಿ ನಿವೇಶನ ಇಲ್ಲವೇ ಹಿಂದೆ ಮಂಜೂರಾಗಿದ್ದ ನಿವೇಶನವನ್ನೇ ಒಂದು ವಾರದೊಳಗೆ ನೀಡದಿದ್ದರೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಎದುರು ಧರಣಿ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಸಿದ್ದಾರೆ.

ಬುಧವಾರ ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2006ರಲ್ಲಿ ಬಿಡಿಎ ನಿವೇಶನ ಮಂಜೂರಾಗಿತ್ತು. ಆಗ ಪ್ರದೇಶ ಅಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ, ಹಾಗಾಗಿ ಬದಲಿ ನಿವೇಶನ ನೀಡುವಂತೆ ಬಿಡಿಎಗೆ ಮನವಿ ಮಾಡಿದ್ದೆ, ಆದರೆ ಈವರೆಗೆ ಬದಲಿ ನಿವೇಶನ ನೀಡಿಲ್ಲ. ಈ ಮಧ್ಯ ಶಕುಂತಲಾ ಎಂಬುವವರಿಗೆ ಬಿಡಿಎ ಈ ನಿವೇಶನವನ್ನು ಮಂಜೂರು ಮಾಡಿದೆ. ಈಕೆ ಖರೀದಿಸಿದ 45 ದಿನಗಳಲ್ಲಿ ಆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಹೊಸದಾಗಿ ನಿವೇಶನ ಖರೀದಿಸಿದ ವ್ಯಕ್ತಿ ಅಲ್ಲಿ ಕೊಳವೆಬಾವಿ ಕೊರೆಸುತ್ತಿರುವ ವಿಷಯವನ್ನು ಪಕ್ಕದ ನಿವೇಶನದ ಮಾಲೀಕರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬುಧವಾರ ನಾನೇ ಖುದ್ದಾಗಿ ಬಿಡಿಎಗೆ ತೆರಳಿ ಕಡತ ತರಿಸಿದಾಗ ವಿಷಯ ಗೊತ್ತಾಗಿದೆ. ಅಧಿಕಾರಿಗಳಿಗೆ ನಿಮ್ಮ ಅಕ್ರಮ ಬಯಲಿಗೆ ಎಳೆಯಲು ನಾನೇ ಖುದ್ದು ಬರುತ್ತೇನೆ ಎಂಬ ಎಚ್ಚರಿಕೆ ನೀಡಿದ್ದೇನೆ ಎಂದರು.

ಬಿಡಿಎ ಪೊಗದಸ್ತಾದ ಹುಲ್ಲುಗಾವಲು

ಬಿಡಿಎ ಸಂಸ್ಥೆಯಲ್ಲಿ ಕೆಲಸ ಮಾಡುವ ನಾಲ್ಕನೆ ದರ್ಜೆ ನೌಕರನಿಂದ ಹಿಡಿದು, ಅಧಿಕಾರಿ ವರ್ಗದವರನ್ನು ನೋಡಿದರೆ ಬಿಡಿಎ ಯಾಕೆ ನಷ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ. ಸಾಮಾನ್ಯ ಜನರಿಗೆ 20-30 ವರ್ಷದಿಂದ ಅರ್ಜಿ ಹಾಕಿದರೂ ನಿವೇಶನ ಸಿಗುವುದಿಲ್ಲ. ನನ್ನಂತವರಿಗೆ ಈ ರೀತಿ ಆದರೆ ಸಾಮಾನ್ಯ ಜನರ ಗತಿ ಏನು, ಸದಾ ನಷ್ಟದಲ್ಲಿರುವ ಆದರೆ ಇಲ್ಲಿಗೆ ಬರಲು ಪೈಪೋಟಿ ಇರುವ ಜಾಗವೆಂದರೆ ಬಿಡಿಎ ಮಾತ್ರ. ದಂಧೆ ಮಾಡಲು ಪೊಗದಸ್ತವಾದ ಹುಲ್ಲುಗಾವಲಾಗಿದೆ ಎಂದು ವ್ಯಂಗ್ಯವಾಡಿದರು.

ಬಿಡಿಎ ಮುಚ್ಚಲು ಏನೇನು ಬೇಕೋ ಅದನ್ನೆಲ್ಲವನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯನ್ನು ಸರಿ ದಾರಿಗೆ ತರುವ ಯೋಚನೆ ಮಾಡುವ ಅಧಿಕಾರಿ ಬಿಡಿಎಗೆ ಬೇಕಾಗಿದೆ ಎಂದು ರವಿ ಹೇಳಿದರು.

click me!