ಹಾಸನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಸ್ಪರ್ಧೆ?

By Web DeskFirst Published Oct 25, 2018, 11:23 AM IST
Highlights

ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ಇದೀಗ ಪ್ರಮುಖ ಮುಖಗಳನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದ್ದು ಇದೇ ವೇಳೆ ಹಾಸನದಿಂದ ಜಾವಗಲ್ ಶ್ರೀನಾಥ್ ಕಣಕ್ಕೆ ಇಳಿಸಲಿದೆ ಎಂದು ಸುದ್ದಿಯೊಂದು ಹರಡಿದೆ.

ಹಾಸನ :  2019ರ ಲೋಕಸಭೆ ಚುನಾವಣಾ ಕಣ ಈಗಲೇ ರಂಗೇರತೊಡಗಿದ್ದು, ಹಾಸನ ಲೋಕಸಭಾ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅಥವಾ ಕ್ಯಾಪ್ಟನ್‌ ಗೋಪಿನಾಥ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ಭಾರೀ ಸದ್ದು ಮಾಡಿದೆ. ಈ ವೇಳೆ ಸ್ವತಃ ‘ಕನ್ನಡಪ್ರಭ’ದ ಜತೆ ಮಾತನಾಡಿದ ಶ್ರೀನಾಥ್‌, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿರುವ ಸಚಿವ ಎಚ್‌.ಡಿ.ರೇವಣ್ಣ, ಬಿಜೆಪಿಯವರು ಹಾಸನದಿಂದ ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಮಾಡಲಿ ನನಗೆ ಸಂತೋಷ. ಬಿಜೆಪಿ ಯಾರನ್ನಾದರೂ ಅಭ್ಯರ್ಥಿ ಮಾಡಲಿ ನನಗೇನು? ಶ್ರೀನಾಥ್‌ ಅವರನ್ನಾದರೂ ನಿಲ್ಲಿಸಲಿ, ಗೋಪಿನಾಥ್‌ ಅವರನ್ನಾದರೂ ನಿಲ್ಲಿಸಲಿ ಎಂದು ಹೇಳಿದರು.

ಜೆಡಿಎಸ್‌ ಭದ್ರಕೋಟೆಯಾಗಿರುವ ಹಾಸನದಲ್ಲಿ ಅಧಿಪತ್ಯ ಸಾಧಿಸುವ ಸಲುವಾಗಿ ಬಿಜೆಪಿ, ಸ್ಥಳೀಯರು ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ದೇಶದ ಕೀರ್ತಿ ಪಾತಕೆ ಹಾರಿಸಿರುವ ಜಾವಗಲ್‌ ಶ್ರೀನಾಥ್‌ಗೆ ಮಣೆ ಹಾಕಿದೆ ಎಂಬ ಸುದ್ದಿ ಹರಡಿತ್ತು. ಕ್ರಿಕೆಟಿಗರಾದ ಎಂ.ಎಸ್‌.ಧೋನಿ ಹಾಗೂ ಗೌತಮ್‌ ಗಂಭೀರ್‌ ಸಹ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು 2 ದಿನಗಳ ಹಿಂದೆ ವರದಿಯಾಗಿತ್ತು.

ರಾಜಕೀಯಕ್ಕೆ ಬರಲ್ಲ: ಶ್ರೀನಾಥ್‌

‘ಹೇ... ಇಲ್ಲಪ್ಪ ನಾನು ರಾಜಕೀಯಕ್ಕೆ ಬರೋದಿಲ್ಲ. ನಾನು ಹೇಳುತ್ತಿಲ್ಲವಾ ನಿಮಗೆ... ಅಯ್ಯೋ ರಾಮ... ಪ್ರತಿವರ್ಷ ಶುರು ಮಾಡುತ್ತೀರಲ್ಲಾ ಈ ತರಹದ್ದು ಏನಾದರೂ ಒಂದು...’

- ಹೀಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದವರು ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶ್ರೀನಾಥ್‌, ‘ನಾನೂ ಬೆಳಗ್ಗೆಯಿಂದ ಟೀವಿ ನೋಡುತ್ತಿದ್ದೇನೆ. ಟಿವಿಯವರು ಸುಮ್ಮನೇ ಏನೋ ಹಾಕುತ್ತಿದ್ದಾರೆ. ಇಲ್ಲಪ್ಪಾ, ನಾನು ರಾಜಕೀಯಕ್ಕೆ ಬರುವುದಿಲ್ಲ. ಇದನ್ನು ಸಾವಿರ ಬಾರಿ ಹೇಳಬೇಕಾ. ನನಗೆ ರಾಜಕೀಯ ಬೇಡಪ್ಪ’ ಎಂದರು.

click me!