ಕೊಪ್ಪಳ ಕೋಮುಗಲಭೆ: ಒಂದು ಕೋಮಿನ ಯುವಕರೊಂದಿಗೆ ಸಿಪಿಐ ಕಾಳಿಕೃಷ್ಣ ಸಂಭ್ರಮ? ಇನ್ಸ್'ಪೆಕ್ಟರ್ ಅಮಾನತಿಗೆ ಹಿಂದೂ ಸಂಘಟನೆಗಳ ಆಗ್ರಹ

Published : Dec 13, 2016, 09:57 AM ISTUpdated : Apr 11, 2018, 01:10 PM IST
ಕೊಪ್ಪಳ ಕೋಮುಗಲಭೆ: ಒಂದು ಕೋಮಿನ ಯುವಕರೊಂದಿಗೆ ಸಿಪಿಐ ಕಾಳಿಕೃಷ್ಣ ಸಂಭ್ರಮ? ಇನ್ಸ್'ಪೆಕ್ಟರ್ ಅಮಾನತಿಗೆ ಹಿಂದೂ ಸಂಘಟನೆಗಳ ಆಗ್ರಹ

ಸಾರಾಂಶ

ಈ ವಿಡಿಯೋದಲ್ಲಿ ಕಾಳಿಕೃಷ್ಣ ಯುವಕರಿಗೆ ವಿರೋಧ ಮಾಡುವುದನ್ನು ಬಿಟ್ಟು ಕೈ ಎತ್ತಿ ಸಂಭ್ರಮಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕೊಪ್ಪಳ(ಡಿ. 13)​​​: ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಕಾಳಿಕೃಷ್ಣರನ್ನ ಒಂದು ಕೋಮಿನ ಯುವಕರು ಎತ್ತಿ ಕುಣಿದಾಡಿರುವುದು ಇದಿಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಧ್ವಜ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಕೋಮು ಗಲಭೆ ನಡೆಯುತ್ತಿದೆ. ಇಂತಹ ವೇಳೆಯಲ್ಲಿ ಪೊಲೀಸ್ ಅಧಿಕಾರಿ ಕಾಳಿಕೃಷ್ಣನನ್ನು ಒಂದು ಕೋಮಿನ ಯುವಕರು ರಸ್ತೆ ಮದ್ಯಯೇ ಎತ್ತಿ ಕುಣಿದಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿಪಿಐ(ಸರ್ಕಲ್ ಇನ್ಸ್'ಪೆಕ್ಟರ್) ಕಾಳಿಕೃಷ್ಣ ಕೇವಲ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನವ ಆರೋಪಗಳು ಕೇಳಿಬಂದಿದ್ದವು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೀಗ ಕಾಳಿಕೃಷ್ಣರನ್ನು ಒಂದು ಕೋಮಿನ ಯುವಕರು ಹೆಗಲ ಮೇಲೆ ಎತ್ತುಕೊಂಡು ಕುಣಿದಾಡಿರುವ ದೃಶ್ಯ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಕಾಳಿಕೃಷ್ಣ ಯುವಕರಿಗೆ ವಿರೋಧ ಮಾಡುವುದನ್ನು ಬಿಟ್ಟು ಕೈ ಎತ್ತಿ ಸಂಭ್ರಮಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಿಪಿಐ ಕಾಳಿಕೃಷ್ಣರನ್ನು ಒಂದು ಕೋಮಿನ ಯುವಕರು ಎತ್ತಿಕೊಂಡು ಕುಣಿದಾಡುವುದನ್ನು ನೋಡಿದರೆ ಅವರು ಒಂದು ಕೋಮಿನ ಪರವಾಗಿ ಕೆಲಸ ಮಾಡುವುದು ಸ್ಪಷ್ಟವಾಗುತ್ತದೆ. ಹೀಗಾಗ ಈ ಕೂಡಲೇ ಪೊಲೀಸ್​ ಇಲಾಖೆ ಸಿಪಿಐ ಕಾಳಿಕೃಷ್ಣರನ್ನ ಅಮಾನತು ಮಾಡಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಗಂಗಾವತಿ ನಗರ ಠಾಣೆಯ ಇನ್ಸ್'ಪೆಕ್ಟರ್ ಭೀಮನಗೌಡ ಬಿರಾದಾರ್ ವಿರುದ್ಧವೂ ಇಂಥದ್ದೇ ಆರೋಪವಿದೆ.

ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಕಾಳಿಕೃಷ್ಣ ಹಾಗೂ ಗಂಗಾವತಿ ನಗರ ಠಾಣೆಯ ಇನ್ಸೆಪೆಕ್ಟರ್​ ಭೀಮನಗೌಡ ಬಿರಾದಾರ ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ಮೋಹನ್,​​​​​​​​​ ಯಾರೇ ಅಧಿಕಾರಗಳು ಒಂದು ಕೋಮಿನ ಪರವಾಗಿ ಕೆಲಸ ಮಾಡಿದ್ರೆ ಅದು ತಪ್ಪು. ಈ ಬಗ್ಗೆ ಐಜಿಪಿಯವರು ತನಿಖೆ ನಡೆಸುತ್ತಿದ್ದಾರೆ ಎಂದರು. ಸಿಪಿಐ ಕಾಳಿಕೃಷ್ಣ ಅವರನ್ನು ಒಂದು ಕೋಮಿನ ಯುವಕರು ಹೆಗಲ ಮೇಲೆ ಹೊತ್ತುಕೊಂಡು ಕುಣಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ ಮೋಹನ್, ಈ ಪ್ರಕರಣದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇನ್ನು, ಗಂಗಾವತಿ ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇದನ್ನು ಡಿಸೆಂಬರ್ 18ರವರೆಗೆ ಮುಂದುವರೆಸಲಾಗುತ್ತದೆ. ಈಗಾಗಲೇ ನಗರದಲ್ಲಿ ಬಂದೋಬಸ್ತ್'ಗಾಗಿ ಹೆಚ್ಚಿನ ಪೊಲೀಸರು ಇದ್ದು, ಜನತೆ ಶಾಂತಿಯನ್ನು ಕಾಪಾಡಲು ಸಹಕರಿಸಿಬೇಕೆಂದು ಅಲೋಕ್ ಮೋಹನ್​ ಮನವಿ ಮಾಡಿದರು.

ಕೋಮುಗಲಭೆಯಿಂದ ತತ್ತರಿಸಿದ್ದ ಕೊಪ್ಪಳದ ಗಂಗಾವತಿ ನಗರ ಇದೀಗ ಶಾಂತವಾಗಿದೆ ಎಂದು ಇದೇ ವೇಳೆ ಅಲೋಕ್ ಮೋಹನ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಗಲಭೆ ಹಿನ್ನಲೆಯಲ್ಲಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 30ಕ್ಕೂ ಹೆಚ್ಚು ಜನರ ಬಂಧನ ಮಾಡಲಾಗಿದೆ.

ನಿನ್ನೆಯ ಹನುಮ ಮಾಲಾಧಾರಿಗಳ ಮೆರವಣಿಗೆಯಲ್ಲಿ ಕೆಲವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ ಮೋಹನ್,​ ಮೆರವಣಿಗೆಲ್ಲಿ ಯಾರೆಲ್ಲಾ ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದರು ಎನ್ನುವುದನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!