
ರಾಜ್ಯದಲ್ಲಿ ಭೀಕರ ಬರಗಾಲ ಬಂದಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಬರದ ಜೊತೆಗೆ ಕೆಲವೆಡೆ ಭಾರೀ ಮೇವು ಹಗರಣವೂ ನಡೆಯುತ್ತಿದೆ. ಈ ಹಗರಣ ಕರುನಾಡಿನ ಗೋಸಂಪತ್ತಿಗೇ ಕಂಟಕವಾಗಿದೆ. ಈ ಕಟು ಸತ್ಯವನ್ನು ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ.
ನಮ್ಮ ರಾಜ್ಯ ತೀವ್ರ ಬರದಿಂದ ತತ್ತರಿಸಿ ಹೋಗಿದೆ. ರಾಜ್ಯದ 139 ತಾಲ್ಲೂಕುಗಳಲ್ಲಿ ನೀರಿಲ್ಲದೆ ಜನ ಕಂಗಾಲಾಗಿದ್ದಾರೆ. ಮೇವಿಲ್ಲದೆ ಜಾನುವಾರುಗಳು ಸಾಯುತ್ತಿವೆ. ಅದರಲ್ಲೂ ಕಾವೇರಿ, ಕಬಿನಿ ಮಡಿಲಲ್ಲಿರೋ ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿದೆ. ಅಲ್ಲಿ ಈಗಾಗಲೇ ಸಾವಿರಾರು ಜಾನುವಾರಗಳು ನೀರು, ಮೇವಿಲ್ಲದೆ ಪ್ರಾಣ ಬಿಟ್ಟಿವೆ, ಬಿಡುತ್ತಲಿವೆ.
ಇಂಥಾ ಒಂದು ಭಯಾನಕ ಆತಂಕ ಜನರನ್ನು ಕಾಡುತ್ತಿದೆ. ಯಾಕಂದರೆ ಎಂದೂ ಕಂಡರಿಯದಂಥ ಬರ ಕರುನಾಡಿಗೆ ಬಡಿದಿದೆ. ಅದರಲ್ಲೂ ಬೆಚ್ಚಿ ಬೀಳಿಸೋ ಸಂಗತಿ ಏನಂದರೆ ಕಾವೇರಿ, ಕಬಿನಿ ಮಡಿಲಲ್ಲಿರೋ ಜಿಲ್ಲೆಗಳಲ್ಲೇ ಬರ ಬರ್ಬರವಾಗಿರುವುದು.
ಆದರೆ ಮೂರು ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಬರದ ಚಿತ್ರಣ ಇನ್ನಷ್ಟು ಭೀಕರವಾಗಿದೆ. ಇದನ್ನ ಸೆರೆ ಹಿಡಿದು ಇಡೀ ಕರುನಾಡಿಗೆ ತೋರಿಸೋ ಸಲುವಾಗಿಯೇ ಸುವರ್ಣ ನ್ಯೂಸಿನ ಕವರ್ ಸ್ಟೋರಿ ತಂಡ ಚಾಮರಾಜನಗರ ಜಿಲ್ಲೆಯ ಬರಪೀಡಿತ ಪ್ರದೇಶಗಳಾದ ಅನೂರು, ಕೊಳ್ಳೆಗಾಲ, ಗುಂಡ್ಲುಪೇಟೆಯ ನಾನಾ ಹಳ್ಳಿಗಳಿಗೆ ಭೇಟಿ ಕೊಟ್ಟಿತು.
ಇಲ್ಲಿನ ರೈತರ ಗೋಳು ಆಕ್ರಂದನ ಕರುಳು ಕಿವುಚುತ್ತಿತ್ತು
ನಮ್ಮ ತಂಡ ಭೇಟಿ ಕೊಟ್ಟಾಗ ಹೈನು ಸಂಪತ್ತನ್ನೇ ನಂಬಿರೋ ರೈತರು ಅಕ್ಷರಶ: ಕಂಗಾಲಾಗಿರೊ ಸತ್ಯ ಬಯಲಾಗಿತ್ತು. ಮೇವು ನೀರಿಲ್ಲದೆ ತಮ್ಮ ಕಣ್ಣಮುಂದೆಯೇ ದನಕರುಗಳು ಕೊನೆಯುಸಿರೆಳೆಯುವುದನ್ನು ಕಾಣಲಾಗದೆ ಅವುಗಳನ್ನ ಕಾಡಿಗೆ ಅಟ್ಟುತ್ತಿದ್ದರು. ಹೀಗೆ ಕಾಡು ಸೇರಿದ ದನಕರುಗಳ ಸ್ಥಿತಿ ಹೇಗಿದೆ ಅಂತ ನೋಡಲು ಹೋದರೆ ಅಲ್ಲಿ ಇನ್ನೊಂದು ಶಾಕ್ ಕಾದಿತ್ತು.
ಚಾಮರಾಜನಗರ ಜಿಲ್ಲೆ ರೈತರ ಗೋಳು ಕೇಳುವವರಿಲ್ಲ.ಇಲ್ಲಿನ ಜಾನುವಾರುಗಳಿಗೆ ನೀರಿಲ್ಲ, ಮೇವಿಲ್ಲ. ದನಕರುಗಳಿಗೆ ಗೋಶಾಲೆಗಳನ್ನು ತೆರೆದೇ ಇಲ್ಲ. ಇಂಥಾ ತ್ರಿಶಂಕು ಸ್ಥಿತಿಯಲ್ಲಿ ಜಿಲ್ಲೆಯ ರೈತರು ಕಣ್ಣಮುಂದೆ ಸಾಕಿ ಸಲುಹಿದ ದನಕರುಗಳು ಕೊನೆಯುಸಿರೆಳೆಯುವುದನ್ನು ಕಾಣಲಾಗದೆ ಬೆಟ್ಟ ಗುಡ್ಡಕ್ಕೆ ಅಟ್ಟುತ್ತಿದ್ದರು.
ಆದರೆ ಕಾಡು ಸೇರಿದ ದನಕರುಗಳು ಹಲವು ಸತ್ತು ಬಿದ್ದಿದ್ದರೆ, ಬದುಕಿರೋ ಗೋವುಗಳ ಕೂಗು ಕಣ್ಣೀರು ತರಿಸುತ್ತಿತ್ತು. ಆದರೆ ಈ ಸಮಸ್ಯೆಗಳಿಗೆ ಗೋಶಾಲೆಗಳ ಬಗ್ಗೆ ಸರ್ಕಾರದ ಪ್ರತಿನಿಧಿಗಳನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ.
ಮೇವು ಹಗರಣದ ಭರ್ಜರಿಯಾಗಿ ನಡೀತಿದೆ
ನಮ್ಮ ತಂಡ ಸರ್ಕಾರಿ ಗೋಶಾಲೆಗಳಿಗೆ ಭೇಟಿ ನೀಡಿದಾಗ ಹಲವು ದೂರುಗಳು ಕೇಳಿ ಬಂದವು. ಇದರಲ್ಲಿ ಒಂದಂತು ಸ್ಪಷ್ಟವಾಗಿತ್ತು. ಗೋಶಾಲೆಗಳಲ್ಲಿ ಎಲ್ಲವೂ ಸರಿ ಇಲ್ಲ. ಇಲ್ಲಿ ಮೇವು ಹಗರಣ ಭರ್ಜರಿಯಾಗಿ ನಡೀತಿದೆ.
ಸರ್ಕಾರ ಘೋಷಿಸಿರುವಷ್ಟು ಪ್ರಮಾಣದಲ್ಲಿ, ಅಂಥಾ ಗುಣಮಟ್ಟದ ಮೇವನ್ನ ರೈತರಿಗೆ ನೀಡಲಾಗುತ್ತಿಲ್ಲ. ಅಲ್ಲದೆ ಗೋಶಾಲೆಗಳಲ್ಲಿ ಯಾವ ಸೌಲಭ್ಯಗಳನ್ನೂ ಕಲ್ಪಿಸದೆ ಕಂದಾಯ ಅಧಿಕಾರಿಗಳು ಹಣ ಗುಳುಂ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಮೇವು ಕೊಟ್ಟ ಗೋವುಗಳ ಸಂಖ್ಯೆಯಲ್ಲೂ ಗೋಲ್'ಮಾಲ್ ಮಾಡ್ತಿದ್ದಾರೆ ಅಧಿಕಾರಿಗಳು.
ಈ ಬಗ್ಗೆ ವಿಚಾರಿಸಿದರೆ ರೈತರನ್ನು ಹೆದರಿಸಲಾಗುತ್ತಿದೆ. ರೈತರ ಮಧ್ಯೆಯೇ ಜಗಳ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಭ್ರಷ್ಟರು. ಅಲ್ಲದೆ ಗೋಶಾಲೆಯಲ್ಲಿ ನಡೀತಿರೋ ಅಕ್ರಮದ ವಿರುದ್ಧ ಪ್ರತಿಭಟನೆ ಧರಣಿ ಮಾಡಿದರೆ ರೈತರ ಮೇಲೆ ಗೂಂಡಾಗಿರಿ ಮಾಡುತ್ತಾರೆ ತಹಶೀಲ್ದಾರ್.
ಇದಕ್ಕೆಲ್ಲಾ ಕಾರಣ ಏನು ಅಂತ ತನಿಖೆ ಮಾಡಿದರೆ ಈ ಮೇವು ಹಗರಣದಲ್ಲಿ ಟೆಂಡರುದಾರನಿಂದ ಹಿಡಿದು ಜಿಲ್ಲಾಧಿಕಾರಿ'ವರೆಗೆ ಪ್ರತಿಯೊಬ್ಬರು ಗೋಶಾಲೆ ಹೆಸರಲ್ಲಿ ಭರ್ಜರಿ ಲೂಟಿ ಮಾಡುತ್ತಿದ್ದಾರೆ.
ಗೋಶಾಲೆ ಸ್ಥಾಪನೆಯಿಂದ ಹಿಡಿದು ಮೇವು ಸರಬರಾಜು'ವರೆಗೆ ಹೆಜ್ಜೆ ಹೆಜ್ಜೆಯಲ್ಲಿ ಮೋಸ ನಡೆದಿದೆ. ಇದಕ್ಕೆ ಪೂರಕವಾದ ದಾಖಲೆಗಳು ಕವರ್'ಸ್ಟೋರಿ ತಂಡಕ್ಕೆ ಸಿಕ್ಕಿದೆ. ಹಾಗಾಗಿ ಈ ಭಾರೀ ಹಗರಣದ ಕುರಿತು ಮುಖ್ಯಮಂತ್ರಿ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.