
ಬೆಂಗಳೂರು (ಅ.22): ಹಸಿವು ಮುಕ್ತ ಬೆಂಗಳೂರು ಮಾಡುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ಆರಂಭಿಸಿತು. ಆದರೆ ರಿಯಾಯತಿ ದರದಲ್ಲಿ ದೊರೆಯುವ ಊಟ- ತಿಂಡಿ ಕಸಿದುಕೊಳ್ಳುವ ಯತ್ನ ನಡೆಯುತ್ತಿದೇಯಾ...? ಹೀಗೊಂದಿಷ್ಟು ಅನುಮಾನಗಳು ಪಾಲಿಕೆಯ ಅಧಿಕಾರಿಗಳಲ್ಲಿ ಮೂಡುತ್ತಿದೆ.
ಮೊನ್ನೆ ಶುಕ್ರವಾರ (ಅಕ್ಟೋಬರ್ 20 ) ಸಂಭ್ರಮದಿಂದ ದೀಪಾವಳಿ ಆಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ವಾರ್ಡ್ 73 ಕೊಟ್ಟಿಗೆ ಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗದ್ದಲ, ಕೂಗಾಟ ನಡೆಯುತ್ತಿತ್ತು. ಏಕಂದ್ರೆ ಅಂದು ಬೆಳಗಿನ ಉಪ್ಪಿಟ್ಟು ಮತ್ತು ಕೇಸರಿ ಬಾತ್ ನಲ್ಲಿ ಜಿರಳೆ ಪತ್ತೆ ಯಾಗಿತ್ತು.ಈ ಸಂಬಂಧ ಗ್ರಾಹಕರು ಕ್ಯಾಂಟೀನ್ ಸಿಬ್ಬಂದಿಯ ವಿರುದ್ಧ ಕೂಗಾಡಿದ್ದರು.ಅಲ್ಲದೆ ಜಿರಳೆ ಬಿದ್ದ ತಟ್ಟೆಯ ದ್ರಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೊಟ್ಟಿಗೆಪಾಳ್ಯ ವಾರ್ಡ್ ಇಂದಿರಾ ಕ್ಯಾಂಟೀನ್ ಗೆ ಆಹಾರ ಸರಬರಾಜು ಮಾಡುವ ಶೆಫ್ ಟಾಕ್ ಸಂಸ್ಥೆಯ ಸಿಬ್ಬಂದಿ ಹಾಗೂ ಸ್ಥಳದಲ್ಲಿರುವ ಪಾಲಿಕೆ ಅಧಿಕಾರಿಗಳನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಸಿಸಿಟಿವಿ ದ್ರಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳಿಂದ ಈ ಕೃತ್ಯ ನಡೆದಿರುವ ಅನುಮಾನ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ತಿಂಡಿಗೆ ಬಂದಿದ್ದ ನಾಲ್ವರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತನಿಖೆಗೆ ಮೇಯರ್ ಸಂಪತ್ ರಾಜ್ ಒತ್ತಾಯಿಸಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಫೇಸ್ ಬುಕ್’ನಲ್ಲಿ ಪೋಸ್ಟ್ ಹಾಕಿದ ಹೇಮಂತ್ ಕುಮಾರ್ ಸೇರಿದಂತೆ ನಾಲ್ವರ ಶೋಧ ಕಾರ್ಯ ಆರಂಭಿಸಿದ್ದಾರೆ. ಒಟ್ಟಿನಲ್ಲಿ ರಾಜಧಾನಿಯಲ್ಲಿರುವ ಬಡವರ ಹಸಿವು ನೀಗಿಸಲು ಆರಂಭವಾದ ಇಂದಿರಾ ಕ್ಯಾಂಟೀನ್ ಯೋಜನೆಗೆ ಮಸಿಬಳಿಯುವ ಕಾರ್ಯ ಕೆಲವರಿಂದ ಆಗುತ್ತಿದೆಯಾ ಎಂಬ ಅನುಮಾನ ಇದೀಗ ಮೂಡಲಾರಂಭಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.