ಕೆಲವು ಸಚಿವರು, ಶಾಸಕರ ಕ್ಷೇತ್ರದಲ್ಲಿ ವಿರೋಧಿ ಅಲೆ..!

Published : Mar 28, 2018, 07:31 AM ISTUpdated : Apr 11, 2018, 01:04 PM IST
ಕೆಲವು ಸಚಿವರು, ಶಾಸಕರ ಕ್ಷೇತ್ರದಲ್ಲಿ ವಿರೋಧಿ ಅಲೆ..!

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕೆಪಿಸಿಸಿ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಬರುವುದಾಗಿ ತಿಳಿದು ಬಂದಿದೆ. ಆದರೆ ಫಲಿತಾಂಶ ಕುರಿತಂತೆ ಪಕ್ಷದಲ್ಲಿ ತುಸು ಅತಿಯಾದ ಆತ್ಮವಿಶ್ವಾಸ ಹಾಗೂ ಕೆಲವು ಸಚಿವರು ಹಾಗೂ ಶಾಸಕರ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕೆಪಿಸಿಸಿ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಬರುವುದಾಗಿ ತಿಳಿದು ಬಂದಿದೆ. ಆದರೆ ಫಲಿತಾಂಶ ಕುರಿತಂತೆ ಪಕ್ಷದಲ್ಲಿ ತುಸು ಅತಿಯಾದ ಆತ್ಮವಿಶ್ವಾಸ ಹಾಗೂ ಕೆಲವು ಸಚಿವರು ಹಾಗೂ ಶಾಸಕರ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಂಡುಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ಬಂದಿದೆ. ಬಿಜೆಪಿ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಸ್ಥಾನ ಪಡೆಯಲಿದೆ. ಆದರೆ ಜೆಡಿಎಸ್‌ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನ ಗಳಿಸಲಿದೆ. ಆಂತರಿಕ ಸಮೀಕ್ಷೆಯಲ್ಲಿ ಹೊರಹೊಮ್ಮಿರುವ ಅಂಶಗಳನ್ನು ಸಮರ್ಥವಾಗಿ ನಿಭಾಯಿಸಿ ನಿರಾಯಾಸವಾಗಿ ಗೆಲ್ಲಲು ರಣತಂತ್ರ ಸಿದ್ಧಪಡಿಸಿದ್ದೇವೆ. ಕೊರಟಗೆರೆ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ಸಿದ್ಧತೆ ಹಾಗೂ ಕಾಂಗ್ರೆಸ್‌ನ ಪ್ರಸ್ತುತ ಸ್ಥಿತಿಗತಿ, ಆಂತರಿಕ ಭಿನ್ನಾಭಿಪ್ರಾಯ, ಆಂತರಿಕ ಸಮೀಕ್ಷೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಮಾಚ್‌ರ್‍ ಒಳಗಾಗಿ ರಾಜ್ಯದ ನಾಲ್ಕೂ ವಿಭಾಗಕ್ಕೂ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಪಕ್ಷಕ್ಕೆ ಪೂರಕ ವಾತಾವರಣ ಇದ್ದರೂ ಕೆಲವು ಸಚಿವರು ಹಾಗೂ ಶಾಸಕರು ಕ್ಷೇತ್ರದತ್ತ ಸುಳಿಯದಿರುವುದು ಹಾಗೂ ಜನರ ಕೈಗೆ ಸಿಗದಿರುವುದರಿಂದ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಂತಹ ಶಾಸಕರು ಹಾಗೂ ಸಚಿವರಿಗೆ ಕರೆದು ಎಚ್ಚರಿಕೆ ನೀಡಿದ್ದೇವೆ. ನಿಮ್ಮ ಧೋರಣೆ ತಿದ್ದಿಕೊಂಡು ಕ್ಷೇತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದೇವೆ. ಜತೆಗೆ ಪಕ್ಷದಲ್ಲಿರುವ ಅತಿಯಾದ ಆತ್ಮವಿಶ್ವಾಸದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಕೆಲ ಶಾಸಕರಿಗೆ ಟಿಕೆಟ್‌ ಡೌಟು: ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇಲ್ಲ ಎಂದು ಇದೇ ವೇಳೆ ಪರಮೇಶ್ವರ್‌ ಪರೋಕ್ಷವಾಗಿ ಹೇಳಿದರು.

ಹಾಲಿ ಕಾಂಗ್ರೆಸ್‌ ಶಾಸಕರನ್ನು ಹೊಂದಿರುವ 122 ಕ್ಷೇತ್ರಗಳಲ್ಲಿ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಒಂದೇ ಅರ್ಜಿ ಬಂದಿದೆ. ಉಳಿದ ಕ್ಷೇತ್ರಗಳಲ್ಲಿ 2-3 ಅರ್ಜಿಗಳು ಬಂದಿದ್ದು, ಬಂದಿರುವ ಎಲ್ಲ ಅರ್ಜಿಗಳನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಏ.9 ಹಾಗೂ 10 ರಂದು ನಡೆಯಲಿರುವ ಸ್ಕ್ರೀನಿಂಗ್‌ ಸಮಿತಿ ಸಭೆಯಲ್ಲಿ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಟ್ಟಾರೆ 223 ಕ್ಷೇತ್ರಗಳ ಪಟ್ಟಿಯನ್ನು ಏ. 15ರೊಳಗಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

20ಕ್ಕೂ ಹೆಚ್ಚು ಶಾಸಕರ ಸಂಬಂಧಿಗಳಿಂದ ಟಿಕೆಟ್‌ ಬೇಡಿಕೆ:

ಹಾಲಿ ಇರುವ 20-30 ಮಂದಿ ಶಾಸಕರ ಸಂಬಂಧಿಕರಿಂದ ಟಿಕೆಟ್‌ಗಾಗಿ ಬೇಡಿಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್‌.ಸಿ. ಮಹದೇವಪ್ಪ, ರಾಮಲಿಂಗಾರೆಡ್ಡಿ, ಮಲ್ಲಿಕಾರ್ಜುನ ಖರ್ಗೆಯಂತಹ ಪ್ರಮುಖರೂ ಸೇರಿ 20-30 ಮಂದಿಯಿಂದ ತಮ್ಮ ಸಂಬಂಧಿಕರಿಗೆ ಟಿಕೆಟ್‌ ನೀಡುವಂತೆ ಬೇಡಿಕೆ ಬಂದಿದೆ. ಜತೆಗೆ 20 ಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಇದರಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್‌ ನೀಡಲು ಹೈಕಮಾಂಡ್‌ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್‌ ತಿಳಿಸಿದರು.

ಬೆಂಗಳೂರಿನಲ್ಲಿ ಕಠಿಣ ಪರಿಸ್ಥಿತಿ: ಪರಂ

ಬೆಂಗಳೂರಿನಲ್ಲಿ ಸ್ವಲ್ಪ ಕಠಿಣ ಪರಿಸ್ಥಿತಿ ಇದೆ. ಹೀಗಾಗಿ ಬೆಂಗಳೂರಿಗಾಗಿ ವಿಶೇಷ ರಣತಂತ್ರ ಹೆಣೆದಿದ್ದೇವೆ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

ನಗರದಲ್ಲಿ ಹಾಲಿ ಇರುವ ಸ್ಥಾನಗಳ ಜತೆಗೆ ಇನ್ನೂ ಎರಡು ಸ್ಥಾನ ಹೆಚ್ಚಾಗಿ ಗೆಲ್ಲಲಿದ್ದೇವೆ. ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಪ್ರಕರಣದಲ್ಲಿ ಪಕ್ಷ ಹಾಗೂ ಸರ್ಕಾರ ಅವರನ್ನು ರಕ್ಷಿಸಿಲ್ಲ. ಹೀಗಾಗಿ ಈ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ನಷ್ಟಉಂಟಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಕಷ್ಟುಟೀಕೆ-ಟಿಪ್ಪಣಿ ಎದುರಿಸುತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾಜ್‌ರ್‍ ಕೂಡ ಅವರ ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂಬುದು ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೀಗಾಗಿ ಅನಗತ್ಯವಾಗಿ ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಿಸುವ ಪ್ರಯತ್ನ ಮಾಡುವುದಿಲ್ಲ. ಬೆಂಗಳೂರು ಸ್ವಲ್ಪ ಕಠಿಣವಾಗಿರುವುದರಿಂದ ವಿಶೇಷ ರಣತಂತ್ರ ರೂಪಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಸ್ಥಿತಿಗತಿ ಬಗ್ಗೆ ಭಯ ಇತ್ತು. ಆದರೆ, ರಾಹುಲ್‌ಗಾಂಧಿ ಜನಾಶೀರ್ವಾದ ಯಾತ್ರೆಗೆ ದೊರೆತ ಅಭೂತ ಪೂರ್ವ ಪ್ರತಿಕ್ರಿಯೆಯಿಂದಾಗಿ ಅಳಕು ಮಾಯವಾಗಿದೆ. ಕರಾವಳಿ ಭಾಗದಲ್ಲೂ ಕಾಂಗ್ರೆಸ್‌ಗೆ ಉತ್ತಮ ಸ್ಥಿತಿ ಇದೆ ಎಂದರು.

ಪಕ್ಷದಲ್ಲಿ ಹೊರಗಿನವರು ಹಾಗೂ ಒಳಗಿನವರು ಎಂಬ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ಯಾರನ್ನು ಆಯ್ಕೆ ಮಾಡುತ್ತದೆಯೋ ಅವರೇ ಮುಖ್ಯಮಂತ್ರಿಯಾಗುತ್ತಾರೆ.

-ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!