ಕೇವಲ ಪಾಸ್‌ ಅಲ್ಲ, ಡಿಸ್ಟಿಂಕ್ಷನ್‌ ಪಡೆದು ಕಾಂಗ್ರೆಸ್‌ ಅಧಿಕಾರಕ್ಕೆ

By Suvarna Web DeskFirst Published Mar 28, 2018, 7:05 AM IST
Highlights

ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕಾಂಗ್ರೆಸ್‌ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಪರೀಕ್ಷೆಯಲ್ಲಿ ಕೇವಲ ಪಾಸ್‌ ಆಗುವುದಲ್ಲ ಡಿಸ್ಟಿಂಕ್ಷನ್‌ ಪಡೆಯುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಕಾಂಗ್ರೆಸ್‌ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಪರೀಕ್ಷೆಯಲ್ಲಿ ಕೇವಲ ಪಾಸ್‌ ಆಗುವುದಲ್ಲ ಡಿಸ್ಟಿಂಕ್ಷನ್‌ ಪಡೆಯುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ದಿನಾಂಕ ಬೇಗ ಘೋಷಣೆಯಾಗಲಿ ಎಂದು ರಾಜ್ಯ ಕಾಂಗ್ರೆಸ್‌ ಕಾಯುತ್ತಿತ್ತು. ನಮ್ಮ ಆಪೇಕ್ಷೆಯಂತೆ ಚುನಾವಣಾ ದಿನಾಂಕ ಘೋಷಣೆ ಮಾಡಿದ ಕೇಂದ್ರ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ ಈ ಬಾರಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದರು.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟುಅಭಿವೃದ್ಧಿ ಮಾಡಿದೆ. ಜನ ಮತ್ತೆ ನಮಗೆ ಬೆಂಬಲ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಐದು ವರ್ಷದಲ್ಲಿ ಯಾವುದೇ ಸಂದರ್ಭದಲ್ಲೂ ಅಸ್ಥಿರತೆ ನಿರ್ಮಾಣವಾಗಿಲ್ಲ. ನಮ್ಮ ಎಲ್ಲಾ ಕಾರ್ಯಕ್ರಮಗಳು ಜನರಿಗೆ ಮುಟ್ಟಿವೆ. ನಾಲ್ಕೂವರೆ ಕೋಟಿಗೂ ಹೆಚ್ಚು ಮಂದಿ ಸರ್ಕಾರದ ವಿವಿಧ ಯೋಜನೆಗಳ ನೇರ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಜನರು ನಮ್ಮ ಕೈ ಬಿಡುವುದಿಲ್ಲ ಎಂದು ಹೇಳಿದರು.

ಸಾರ್ವಜನಿಕ ಸಮಸ್ಯೆಗಳಿಗೆ ರಾಜ್ಯ ಸರ್ಕಾರವು ಎಲ್ಲಾ ವಿಚಾರದಲ್ಲೂ ಸ್ಪಂದಿಸಿದೆ. ಸರ್ಕಾರ ಕೆಲಸಗಳನ್ನು ಬದ್ಧತೆಯಿಂದ ಮಾಡಿದೆ. ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಲಿದ್ದೇವೆ. ಕಳೆದ ಚುನಾವಣೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ ಬಹುತೇಕ ಭರವಸೆ ಈಡೇರಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಏನು ಮಾಡುತ್ತೇವೆ ಎಂಬುದನ್ನು ಚುನಾವಣಾ ಪ್ರಣಾಳಿಕೆ ಮೂಲಕ ಜನರ ಮುಂದಿಡುತ್ತೇವೆ. ಹೀಗಾಗಿ ನಮ್ಮ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಕಿಡಿ: ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸುವ ಮೊದಲೇ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿರುವ ಬಗ್ಗೆ ದಿನೇಶ್‌ ಗುಂಡೂರಾವ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣಾ ಆಯೋಗಕ್ಕೂ ಮೊದಲೇ ಕೇಂದ್ರ ಸರ್ಕಾರಕ್ಕೆ ಚುನಾವಣಾ ದಿನಾಂಕ ಗೊತ್ತಾಗಿದೆ. ಕೇಂದ್ರ ಸರ್ಕಾರವು ಚುನಾವಣೆ ವಿಚಾರದಲ್ಲಿ ಎಷ್ಟುಕೀಳು ತಂತ್ರಗಳನ್ನು ಮಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

click me!