ಬಿಜೆಪಿ ಪ್ರಾಬಲ್ಯದ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು

By Web DeskFirst Published Aug 14, 2018, 9:17 AM IST
Highlights

ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿವೆ. ಇದೇ ವೇಳೆ ಸಮೀಕ್ಷೆಯೊಂದು ಕಾಂಗ್ರೆಸ್ ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆಯಲಿದೆ ಎಂದು ಹೇಳಿದೆ. 

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿತ 3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಬಿಜೆಪಿಗೆ ವಿಪಕ್ಷ ಕಾಂಗ್ರೆಸ್‌ ಭರ್ಜರಿ ಏಟು ನೀಡಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ತಕ್ಷಣಕ್ಕೆ ವಿಧಾನಸಭಾ ಚುನಾವಣೆ ನಡೆದರೆ, ಮೂರೂ ರಾಜ್ಯಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡು, ಕಾಂಗ್ರೆಸ್‌ ಅಧಿಕಾರಕ್ಕೆ ಏರಲಿದೆ ಎಂದು ಎಬಿಪಿ ನ್ಯೂಸ್‌- ಸಿ- ವೋಟರ್‌ ನಡೆಸಿದ ಜನಮತಗಣನೆ ಹೇಳಿದೆ.

ವಿಶೇಷವೆಂದರೆ ಈ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಜನರ ಕಾಂಗ್ರೆಸ್‌ಗೆ ಸೈ ಅಂದಿದ್ದರೂ, ಈ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಜೈಕಾರ ಹಾಕಿದ್ದಾರೆ. ಜೊತೆಗೆ ಪ್ರಧಾನಿ ಅಭ್ಯರ್ಥಿಯಾಗಿ ನಂ.1 ಸ್ಥಾನದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದುವರೆದಿದ್ದಾರೆ.

ಮಧ್ಯಪ್ರದೇಶ:

2013ರ ವಿಧಾನಸಭಾ ಚುನಾವಣೆಯಲ್ಲಿ 230 ಸ್ಥಾನಗಳ ಪೈಕಿ ಭರ್ಜರಿಯಾಗಿ 165 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ 59 ಸ್ಥಾನ ಕಳೆದುಕೊಂಡು 106 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಕಾಂಗ್ರೆಸ್‌ ಕಳೆದ ಬಾರಿಗಿಂತ 59 ಸ್ಥಾನ ಹೆಚ್ಚು ಗೆಲ್ಲುವ ಮೂಲಕ 117 ಸ್ಥಾನದೊಂದಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆದರೆ ಸಿಎಂ ಹುದ್ದೆಗೆ ಶಿವರಾಜ್‌ಸಿಂಗ್‌ ಚೌಹಾಣ್‌ ಅವರೇ ಈಗಲೂ ನಂ.1 ಆಯ್ಕೆ ಎಂದು ರಾಜ್ಯದ ಜನತೆ ಹೇಳಿದ್ದಾರೆ.

ರಾಜಸ್ಥಾನ:

ಕಳೆದ ಬಾರಿ 200 ಸ್ಥಾನಗಳ ಪೈಕಿ 163 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 57 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಕಳೆದ ಬಾರಿ ಧೂಳೀಪಟವಾಗಿದ್ದ ಕಾಂಗ್ರೆಸ್‌ ಈ ಬಾರಿ 130 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ ಶೇ.40.6ರಷ್ಟುಜನ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹ್ಲೋಟ್‌ ಪರ, ಶೇ.24.1ರಷ್ಟುಜನ ಮಾತ್ರ ಹಾಲಿ ಸಿಎಂ ವಸುಂಧರಾ ರಾಜೇ ಪರ ಮತ ಹಾಕಿದ್ದಾರೆ.

ಛತ್ತೀಸ್‌ಗಢ:

90 ಸ್ಥಾನ ಬಲದ ಛತ್ತೀಸ್‌ಗಢದಲ್ಲಿ 15 ವರ್ಷಗಳ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ 49 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 33 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಕಾಂಗ್ರೆಸ್‌ 54 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಸಿಎಂ ಹುದ್ದೆಗೆ ಈಗಲೂ ಶೇ.34.3ರಷ್ಟುಜನ, ಹಾಲಿ ಸಿಎಂ ರಮಣ್‌ಸಿಂಗ್‌ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಶೇ.17.5ರಷ್ಟುಜನ ಮಾಜಿ ಸಿಎಂ ಅಜಿತ್‌ ಜೋಗಿ ಪರ ಒಲವು ವ್ಯಕ್ತಪಡಿಸಿದ್ದಾರೆ.

click me!