ಜೆಡಿಎಸ್‌ ಬೆಂಬಲ ಸಿಗದಿದ್ದರೆ ಕಾಂಗ್ರೆಸ್‌ ಏಕಾಂಗಿ ಹೋರಾಟ

Published : Jul 30, 2019, 07:28 AM IST
ಜೆಡಿಎಸ್‌ ಬೆಂಬಲ ಸಿಗದಿದ್ದರೆ ಕಾಂಗ್ರೆಸ್‌ ಏಕಾಂಗಿ ಹೋರಾಟ

ಸಾರಾಂಶ

ಜೆಡಿಎಸ್‌ ಬೆಂಬಲ ಸಿಗದಿದ್ದರೆ ಕಾಂಗ್ರೆಸ್‌ ಏಕಾಂಗಿ ಹೋರಾಟ| ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ನಿರ್ಧಾರ| ಜೆಡಿಎಸ್‌ನ ಸಹಕಾರ ಸಿಕ್ಕರೆ ಜಂಟಿ ಹೋರಾಟ

ಬೆಂಗಳೂರು[ಜು.30]: ಬಿಜೆಪಿ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ನಮ್ಮ ಜತೆ ಬಂದರೆ ಒಟ್ಟಾಗಿ ಆಡಳಿತಪಕ್ಷದ ವಿರುದ್ಧ ಹೋರಾಟ ನಡೆಸುವುದು. ಜೆಡಿಎಸ್‌ನಿಂದ ಸಹಕಾರ ದೊರೆಯದಿದ್ದರೆ ಏಕಾಂಗಿ ಹೋರಾಟ ನಡೆಸಲಾಗುವುದು ಎಂದು ಸೋಮವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ಸೋಮವಾರ ಕಲಾಪ ಆರಂಭಕ್ಕೂ ಮೊದಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಹಲವು ವಿಚಾರಗಳಲ್ಲಿ ಜೆಡಿಎಸ್‌ ಕುರಿತು ಪರ-ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬಹುತೇಕ ಶಾಸಕರು ಜೆಡಿಎಸ್‌ ಜತೆ ಪ್ರತಿಪಕ್ಷವಾಗಿ ಮೈತ್ರಿ ಮಾಡಿಕೊಳ್ಳುವುದು ಹಾಗೂ ಸದ್ಯದಲ್ಲೇ ಎದುರಾಗಲಿರುವ ಉಪ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದನ್ನು ವಿರೋಧಿಸಿದ್ದಾರೆ. ಅಲ್ಲದೆ ಸರ್ಕಾರ ಪತನದ ಬೆನ್ನಲ್ಲೇ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ$ ಕಾಂಗ್ರೆಸ್‌ಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್‌ನ ನಿರ್ದೇಶಕರನ್ನೇ ಆಪರೇಷನ್‌ ಮಾಡಲು ಹೊರಟಿದ್ದಾರೆ. ಇಷ್ಟೂದಿನ ಇಂತಹವರಿಗೆ ನಮ್ಮ ಪಕ್ಷ ಬೆಂಬಲ ನೀಡಿದೆ ಎಂದು ಅಸಮಾಧಾನ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಉಳಿದಂತೆ, ಪಕ್ಷಕ್ಕೆ ದ್ರೋಹ ಬಗೆದು ಹೋಗಿರುವ ಶಾಸಕರ ಅನರ್ಹತೆಯಿಂದ ಉತ್ತಮ ಶಾಸ್ತಿ ಆಗಿದೆ. ಈ ಅತೃಪ್ತರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. 17 ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಪಕ್ಷದ ನಾಯಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್‌ ಜತೆ ಹೊಂದಾಣಿಕೆ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಜತೆಗೆ ವಿರೋಧಪಕ್ಷದ ನಾಯಕರ ಬಗ್ಗೆಯೂ ದೆಹಲಿ ನಾಯಕರೇ ನಿರ್ಧಾರ ಮಾಡುತ್ತಾರೆ. ಪ್ರಸ್ತುತ ವಿಶ್ವಾಸ ಮತಯಾಚನೆ ಹಾಗೂ ಧನವಿಧೇಯಕ ಮಸೂದೆ ಪಾಸಾಗುವ ವೇಳೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗೋಣ. ಬಿಜೆಪಿ ಪರ ಸಂಖ್ಯಾಬಲವಿದ್ದರೂ ಅವರದ್ದು ಅನೈತಿಕ ಗೆಲುವು ಎಂಬುದನ್ನು ಸದನದಲ್ಲಿ ಸ್ಪಷ್ಟಪಡಿಸೋಣ. ಉಳಿದಂತೆ ಸಭಾತ್ಯಾಗದಂತಹ ಯಾವುದೇ ಅನಗತ್ಯ ಗೊಂದಲ ಸೃಷ್ಟಿಬೇಡ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಹೇಳಿದರು ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್