ಸರ್ಕಾರದ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್‌ ಶಾಸಕ

First Published Jul 11, 2018, 7:27 AM IST
Highlights

 ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಬಜೆಟ್‌ಗೆ ಆಡಳಿತ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ ಕೆನೆ ತುಂಬಿದ ಬಜೆಟ್‌ ಆಗಿದೆ ಎಂದು ಕಾಂಗ್ರೆಸ್‌ ಶಾಸಕ ಟೀಕಿಸಿದ್ದಾರೆ.

ವಿಧಾನಸಭೆ :  ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಬಜೆಟ್‌ಗೆ ಆಡಳಿತ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ ಕೆನೆ ತುಂಬಿದ ಬಜೆಟ್‌ ಆಗಿದೆ ಎಂದು ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕ ನಾರಾಯಣ ರಾವ್‌ ಟೀಕಿಸಿದ್ದಾರೆ.

ಮಂಗಳವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಬಜೆಟ್‌ ಕೆನೆ ತುಂಬಿದ ಹಾಲಿನಲ್ಲಿ ಕೆಲವರಿಗೆ ಮಾತ್ರ ಕೆನೆ ನೀಡಿರುವ ಬಜೆಟ್‌ ಆಗಿದೆ. ಹಾಲು ಎಲ್ಲರಿಗೂ ಸಿಕ್ಕಿದೆ. ಆದರೆ, ಕೆನೆ ಕೆಲವರಿಗೆ ಮಾತ್ರ ಸಿಕ್ಕಿದೆ. ಕೆನೆ ತುಂಬಿದ ಬಜೆಟ್‌ ಇದಾಗಿದ್ದು, ಕೆಲವರಿಗೆ ಮಾತ್ರ ಕೆನೆ ನೀಡಲಾಗಿದೆ ಎಂದು ಸಮ್ಮಿಶ್ರ ಸರ್ಕಾರದ ಬಜೆಟ್‌ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅನುಭವ ಮಂಟಪದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 650 ಕೋಟಿ ರು. ಘೋಷಣೆ ಮಾಡಿದ್ದಾರೆ. ಇದನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಮೊದಲ ಕಂತಿನಲ್ಲಿ 100 ಅಥವಾ 200 ಕೋಟಿ ರು. ಆದರೂ ಬಿಡುಗಡೆ ಮಾಡಬೇಕು. ಒಂದು ವೇಳೆ ಈ ಮೊತ್ತವನ್ನು ಬಿಡುಗಡೆ ಮಾಡಿದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ರಾಜಶೇಖರ ಪಾಟೀಲ್‌, ಅನುಭವ ಮಂಟಪದ ಅಭಿವೃದ್ಧಿಗೆ ಮುಖ್ಯಮಂತ್ರಿ ಉತ್ತರ ನೀಡುವ ವೇಳೆ 100 ಕೋಟಿ ರು. ಘೋಷಣೆ ಮಾಡಲಿದ್ದಾರೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ರಾಜಶೇಖರ್‌ ಪಾಟೀಲ್‌ಗೆ ತಿರುಗೇಟು ನೀಡಿದ ನಾರಾಯಣ ರಾವ್‌, ನೀವು ಹೊಟ್ಟೆತುಂಬಿದವರು. ನಿಮ್ಮಪ್ಪ ಎರಡು ಬಾರಿ ಸಚಿವರಾಗಿದ್ದರು.

ಈಗ ನೀವು ಸಚಿವರಾಗಿದ್ದೀರಿ. ಆದರೆ, ನಾನು ನಿಮ್ಮ ಹಾಗೆ ಅಲ್ಲ, ಹೋರಾಟದ ಮೂಲಕ ಬಂದಿದ್ದೇನೆ. ನಾನು ಅಷ್ಟುಸುಲಭವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ನಂಬುವುದಿಲ್ಲ. ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ 100 ಅಥವಾ 200 ಕೋಟಿ ರು. ಘೋಷಣೆ ಮಾಡಲಿ, ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.

click me!