ಎಚ್‌ಡಿಕೆ ಬೆನ್ನಿಗೆ ನಿಂತ ಕಾಂಗ್ರೆಸ್‌ ಸಚಿವರು

First Published Jun 28, 2018, 8:18 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಕಾಂಗ್ರೆಸ್ಸಿನ ಹಿರಿಯ ಸಚಿವರೂ ಸೇರಿದಂತೆ ಬಹುತೇಕರು ಬಜೆಟ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರು : ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಕಾಂಗ್ರೆಸ್ಸಿನ ಹಿರಿಯ ಸಚಿವರೂ ಸೇರಿದಂತೆ ಬಹುತೇಕರು ಬಜೆಟ್‌ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಔಪಚಾರಿಕ ಮಾತುಕತೆ ವೇಳೆ ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ ಸಂಪುಟದ ಅನೇಕ ಸಚಿವರು, ಬಜೆಟ್‌ ಮಂಡಿಸುವುದು ಅನಿವಾರ್ಯ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಸಚಿವರಾಗಿದ್ದರೂ ಆಗ ಇದ್ದ ಖಾತೆಗಳು ಬೇರೆ ಬೇರೆ. ಈಗ ನಾವು ನಿಭಾಯಿಸುತ್ತಿರುವ ಖಾತೆಗಳು ಬೇರೆ ಬೇರೆ. ಹೀಗಿರುವಾಗ ನಾವು ನಮಗೆ ವಹಿಸಿರುವ ಖಾತೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದಲ್ಲಿ ಹೊಸ ಬಜೆಟ್‌ ಮಂಡನೆಯಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಆದರೆ, ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆಗೆ ಸಂಬಂಧಿಸಿದಂತೆ ಅಪಸ್ವರ ಎತ್ತಿರುವುದರಿಂದ ಬಜೆಟ್‌ ಮಂಡನೆ ಅಗತ್ಯ ಎಂಬ ಪ್ರತಿಪಾದನೆಯನ್ನು ಬಹಿರಂಗವಾಗಿ ಮಾಡುವುದು ಕಷ್ಟವಾಗುತ್ತದೆ. ಹಾಗಂತ ನಾವೆಲ್ಲರೂ ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದೇವೆ ಎಂದರ್ಥವಲ್ಲ. ಹೊಸ ಬಜೆಟ್‌ ಮಂಡನೆಯಾಗಲಿ ಎಂಬುದು ನಮ್ಮ ಸ್ಪಷ್ಟಅಭಿಮತ ಎಂದು ಅನೇಕ ಸಚಿವರು ಕುಮಾರಸ್ವಾಮಿ ಅವರ ಬಳಿ ಪ್ರಸ್ತಾಪಿಸಿದ್ದಾರೆ ಎಂದು ಜೆಡಿಎಸ್‌ನ ಉನ್ನತ ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೈಗಾರಿಕಾ ಸಚಿವ ಕೆ.ಜೆ.ಜಾಜ್‌ರ್‍ ಸೇರಿದಂತೆ ಕೆಲವರು ಮಾತ್ರ ಬಹಿರಂಗವಾಗಿ ಬಜೆಟ್‌ ಮಂಡಿಸುವ ಅಗತ್ಯವಿದೆ ಎಂಬ ಮಾತನ್ನು ಹೇಳಿದ್ದರು. ಆದರೆ, ಇನ್ನುಳಿದ ಬಹುತೇಕ ಕಾಂಗ್ರೆಸ್‌ ಸಚಿವರು ಬಜೆಟ್‌ ಮಂಡನೆ ಬಗ್ಗೆ ಸ್ಪಷ್ಟಅಭಿಪ್ರಾಯ ಹೇಳಿರಲಿಲ್ಲ. ಆದರೆ, ಬಹಿರಂಗವಾಗಿ ಹೇಳದವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡುವ ವೇಳೆ ಬೆಂಬಲ ಸೂಚಿಸಿ ಪರವಾಗಿ ಮಾತನಾಡಿದ್ದಾರೆ. ಇದು ಕುಮಾರಸ್ವಾಮಿ ಅವರ ಬಜೆಟ್‌ ಮಂಡನೆ ಪ್ರಯತ್ನಕ್ಕೆ ಶಕ್ತಿ ಕೊಟ್ಟಂತಾಗಿದೆ ಎಂದು ತಿಳಿದು ಬಂದಿದೆ.

ಜು.5ರಂದು ಬಜೆಟ್‌ ಖಚಿತ, ಕಾಂಗ್ರೆಸ್‌ ವರಿಷ್ಠರ ಭೇಟಿ ಇಲ್ಲ

ಬಜೆಟ್‌ ಮಂಡನೆ ವಿಚಾರದಲ್ಲಿ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಈಗಾಗಲೇ ನಿಗದಿಯಾಗಿರುವಂತೆ ಜು.5ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇನ್ನು ನಾನು ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸಭೆಗಾಗಿ ದೆಹಲಿಗೆ ಬಂದಿದ್ದೇನೆಯೇ ಹೊರತು ಕಾಂಗ್ರೆಸ್‌ ನಾಯಕರ ಭೇಟಿಗಾಗಿ ಅಲ್ಲ. ಸಿದ್ದರಾಮಯ್ಯ ಹೇಳಿಕೆ ಸಂಬಂಧ ದೂರು ನೀಡಲು ಕಾಂಗ್ರೆಸ್‌ ನಾಯಕರ ಭೇಟಿಗೆ ಬಂದಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು.

- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

click me!