ಜಿಂದಾಲ್ ವಿಚಾರ : ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

By Web DeskFirst Published Jun 18, 2019, 7:37 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಜಿಂದಾಲ್ ವಿಜಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಜಿಂದಾಲ್ ವಿಚಾರವಾಗಿ ಅವರು ಹೇಳಿದ್ದೇನು..?

ಬೆಂಗಳೂರು :  ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆ ಕುರಿತು ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಸಂಪುಟ ಉಪ ಸಮಿತಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದೇ ನಾನು. ಹೀಗಂತ ಹೇಳುವ ಮೂಲಕ ಜಿಂದಾಲ್‌ ವಿವಾದ ಕುರಿತ ಮೌನವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುರಿದಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಭಾಗವಾಗಿರುವ ಕಾರಣ ಜಿಂದಾಲ್‌ ಬಗ್ಗೆ ಮಾತನಾಡಲು ಹೋಗಿಲ್ಲ. ಭೂಮಿ ನೀಡುವ ಸಂಬಂಧ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದ ಬಗ್ಗೆ ಟೀಕೆ-ಟಿಪ್ಪಣಿಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಾನೇ ಸಲಹೆ ನೀಡಿದ್ದೆ. ಸಂಪುಟ ಉಪಸಮಿತಿ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಹಾಗಾಗಿ ನಾನು ಮಾತನಾಡುವುದು ಏನಿದೆ ಎಂದು ಪ್ರಶ್ನಿಸಿದರು.

ಜಿಂದಾಲ್‌ ಬಗ್ಗೆ ನಾನು ಮಾತನಾಡಲು ಏನಿದೆ ಎಂದು ಕೇಳಲು ನೀವು ಸಮನ್ವಯ ಸಮಿತಿ ಅಧ್ಯಕ್ಷರಲ್ಲವೇ ಎಂಬ ಪ್ರಶ್ನೆಗೆ, ಸಮನ್ವಯ ಸಮಿತಿಗೂ ಸರ್ಕಾರಕ್ಕೆ ಸಂಬಂಧವಿಲ್ಲ. ಜಿಂದಾಲ್‌ಗೆ ಭೂಮಿ ಪರಭಾರೆ ನಿರ್ಧಾರ ತೆಗೆದುಕೊಂಡಿದ್ದು ಸಚಿವ ಸಂಪುಟ. ನಾನು ಸರ್ಕಾರದಲ್ಲಿ ಇಲ್ಲ ಎಂಬ ಕಾರಣದಿಂದ ಮಾತನಾಡಿಲ್ಲ ಎಂದು ಹೇಳಿದರು.

ರಾಹುಲ್‌ ಗಾಂಧಿ ಭೇಟಿ:

ವೈಯಕ್ತಿಕ ಕೆಲಸ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ಸಾಧ್ಯವಾದರೆ ಮಂಗಳವಾರ ಭೇಟಿ ಮಾಡಿ ಮಾತನಾಡುತ್ತೇನೆ ಎಂದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೇವಲ ಊಹಾಪೋಹ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮನ್ಸೂರ್‌ ಖಾನ್‌ ಗೊತ್ತಿಲ್ಲ:

ಐಎಂಎ ಜ್ಯೂವೆಲರ್ಸ್‌ ಮಾಲಿಕ ಮನ್ಸೂರ್‌ ಖಾನ್‌ ಯಾರೆಂಬುದು ನನಗೆ ಗೊತ್ತಿಲ್ಲ. ಆತನ ಜೊತೆಗೆ ನಾನಿರುವ ಫೋಟೋ ಪ್ರಕಟವಾಗಿದೆ. ಯಾವುದೋ ಕಾರ್ಯಕ್ರಮಕ್ಕೆ ರೋಷನ್‌ ಬೇಗ್‌ ನನ್ನನ್ನು ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಆತನನ್ನೂ ಕರೆದಿದ್ದರು. ವೇದಿಕೆ ಮೇಲಿದ್ದ ಆತ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ. ವಂಚನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮಾಡುತ್ತಿದೆ ಎಂದು ಹೇಳಿದರು.

click me!