ಹಬ್ಬದಂದೂ ವಿಚಾರಣೆ : ವಕೀಲರ ಜತೆ ಚರ್ಚೆಸಿದ ಡಿಕೆಶಿ

By Web DeskFirst Published Sep 2, 2019, 7:19 AM IST
Highlights

ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆಯಿಂದ ವಿನಾಯ್ತಿ ಪಡೆದಿದ್ದರು. ಆದರೆ, ಗಣೇಶ ಚತುರ್ಥಿ ದಿನವಾದ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ.

ನವದೆಹಲಿ [ಸೆ.02]:  ದೆಹಲಿಯ ಸಫ್ದರ್‌ಜಂಗ್‌ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿ ಎರಡು ವರ್ಷಗಳ ಹಿಂದೆ ಸಿಕ್ಕ 8.5 ಕೋಟಿ ರು.  ನಗದಿಗೆ ಸಂಬಂಧಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಜಾರಿ ನಿರ್ದೇಶನಾಲಯ (ಇ.ಡಿ)ದ ವಿಚಾರಣೆಯಿಂದ ವಿನಾಯ್ತಿ ಪಡೆದಿದ್ದರು. ಆದರೆ, ಗಣೇಶ ಚತುರ್ಥಿ ದಿನವಾದ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ಒಂದಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಕೆಲಕಾಲ ವಕೀಲರ ಜತೆಗೂ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.

ಶನಿವಾರ 8 ಗಂಟೆ ಮ್ಯಾರಥಾನ್‌ ವಿಚಾರಣೆಗೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್‌ ರಾತ್ರಿ ಸಂಸದ, ಸೋದರ ಡಿ.ಕೆ. ಸುರೇಶ್‌ ನಿವಾಸದಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಕರ್ನಾಟಕ ಭವನಕ್ಕೆ ಆಗಮಿಸಿದ್ದ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಬಾಲಕೃಷ್ಣ ಅವರ ಜತೆ ಕೆಲಕಾಲ ಮಾತುಕತೆ ನಡೆಸಿದರು. ಹಾಗೆಯೇ ವಕೀಲರನ್ನು ಕೂಡ ಭೇಟಿಯಾಗಿ ಕೆಲಕಾಲ ಸಮಾಲೋಚನೆ ನಡೆಸಿದರು. ಮುಂದಿನ ವಿಚಾರಣೆಯನ್ನು ಎದುರಿಸುವ ನಿಟ್ಟಿನಲ್ಲಿ ಒಂದಷ್ಟುತಯಾರಿಗಳನ್ನು ನಡೆಸಿದರು.

ಗೌರಿ ಗಣೇಶ ಹಬ್ಬ ಮತ್ತು ತಮ್ಮ ಹಿರಿಯರ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸೋಮವಾರ ವಿಚಾರಣೆಗೆ ವಿನಾಯಿತಿ ನೀಡಬೇಕು ಎಂದು ಶನಿವಾರ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳ ಮುಂದೆ ಮನವಿ ಮಾಡಿದ್ದರು. ಆದರೆ, ಈ ಮನವಿಯನ್ನು ತಿರಸ್ಕರಿಸಿದ್ದ ಇ.ಡಿ. ಅಧಿಕಾರಿಗಳು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರು ತಾವು ವಿಚಾರಣೆಗೆ ಎಲ್ಲ ರೀತಿಯಿಂದಲೂ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ, ಒಂದು ತಿಂಗಳು ವಿಚಾರಣೆ ಮುಂದುವರಿದರೂ ಅದಕ್ಕೆ ಸಹಕಾರ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ 5 ಗಂಟೆ, ಶನಿವಾರ 8ಗಂಟೆ ವಿಚಾರಣೆಗೆ ಒಳಗಾಗಿದ್ದಾರೆ.

click me!