ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ : ಪ್ರಧಾನಿ ಅಭ್ಯರ್ಥಿ ಯಾರು..?

By Web DeskFirst Published Oct 23, 2018, 7:35 AM IST
Highlights

ಕಾಂಗ್ರೆಸ್ಸಿನ ಹಿರಿಯ ನಾಯಕ ಪಿ.ಚಿದಂಬರಂ ಹೊಸ ‘ಬಾಂಬ್‌’ ಸಿಡಿಸಿದ್ದಾರೆ. ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ರಾಹುಲ್‌ ಅವರನ್ನು ಕಾಂಗ್ರೆಸ್‌ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ವರ್ಸಸ್‌ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಡುವಣ ಹಣಾಹಣಿಯಾಗಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿರುವಾಗಲೇ, ಕಾಂಗ್ರೆಸ್ಸಿನ ಹಿರಿಯ ನಾಯಕ ಪಿ.ಚಿದಂಬರಂ ಹೊಸ ‘ಬಾಂಬ್‌’ ಸಿಡಿಸಿದ್ದಾರೆ. ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ರಾಹುಲ್‌ ಅವರನ್ನು ಕಾಂಗ್ರೆಸ್‌ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಿದರೆ ಅದು 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಕಷ್ಟ. ಕಾಂಗ್ರೆಸ್‌ಗೆ ಮೈತ್ರಿ ಅನಿವಾರ್ಯ. ಇದಕ್ಕಾಗಿ ಕೆಲವೊಂದು ತ್ಯಾಗವೂ ಅನಿವಾರ್ಯ ಎಂದು ಪಕ್ಷದ ಮತ್ತೋರ್ವ ಹಿರಿಯ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ ಬೆನ್ನಲ್ಲೇ, ಚಿದಂಬರಂ ಅವರಿಂದ ಇಂಥದ್ದೊಂದು ಹೇಳಿಕೆ ಬಂದಿರುವುದು ಸಾಕಷ್ಟುಕುತೂಹಲ ಮೂಡಿಸಿದೆ.

ತಮಿಳು ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಚಿದಂಬರಂ, ‘ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು ಎಂದು ನಾವೆಂದೂ ಹೇಳಿಲ್ಲ. ಕೆಲವೊಂದಿಷ್ಟುಕಾಂಗ್ರೆಸ್ಸಿಗರು ಹೇಳುತ್ತಿದ್ದಾರಷ್ಟೇ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಮಧ್ಯಪ್ರವೇಶಿಸಿ, ಅಂತಹ ಮಾತುಗಳನ್ನು ನಿಲ್ಲಿಸಬೇಕು’ ಎಂದು ಅವರು ತಿಳಿಸಿದ್ದಾರೆ. ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ, ಮಹಾಮೈತ್ರಿಕೂಟ ರಚನೆ ಪ್ರಯತ್ನ ವಿಫಲವಾಗಬಹುದು ಎಂಬ ಕಾರಣಕ್ಕೆ ಚಿದಂಬರಂ ಅವರು ಈ ಮಾತುಗಳನ್ನು ಆಡಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದು ನಮ್ಮ ಹೆಬ್ಬಯಕೆ. ಬಿಜೆಪಿಯ ಬದಲಿಗೆ ಪ್ರಗತಿಪರ, ವೈಯಕ್ತಿಕ ಸ್ವಾತಂತ್ರ್ಯ ಗೌರವಿಸುವ, ತೆರಿಗೆ ಭಯೋತ್ಪಾದನೆಯಲ್ಲಿ ತೊಡಗದ, ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವ, ರೈತರನ್ನು ಮೇಲಕ್ಕೆತ್ತುವ ಪರ್ಯಾಯ ಸರ್ಕಾರ ನೋಡುವುದು ನಮ್ಮ ಉದ್ದೇಶ ಎಂದು ಚಿದಂಬರಂ ತಿಳಿಸಿದ್ದಾರೆ. ಮೊದಲು ಮೈತ್ರಿಕೂಟ ರಚನೆಯಾಗಲಿ. ಚುನಾವಣೆ ನಂತರ ಪ್ರಧಾನಿ ಯಾರೆಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಏನಿದರ ಮರ್ಮ?:  ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾಮೈತ್ರಿಕೂಟವೊಂದನ್ನು ರಚಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಒಂದು ವೇಳೆ, ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ ಆ ಮೈತ್ರಿಕೂಟದ ಭಾಗವಾಗುವ ಸಾಧ್ಯತೆ ಇರುವ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ ಅವರು ಹಿಂಜರಿಯಬಹುದು. ತಮ್ಮನ್ನು ತಾವೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಹುದು ಎಂಬ ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈ ಹೊಸ ರಾಗ ಹಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಿತ್ರಪಕ್ಷಗಳು ಪ್ರಧಾನಿ ಪಾತ್ರ ಅಲಂಕರಿಸಲು ಹೇಳಿದರೆ ಮಾತ್ರ ಆ ಸ್ಥಾನಕ್ಕೇರುವೆ ಎಂದು ಮಾಸಾರಂಭದಲ್ಲಷ್ಟೇ ರಾಹುಲ್‌ ಗಾಂಧಿ ಹೇಳಿದ್ದರು. ಅಲ್ಲದೆ ಮೊದಲು ಪ್ರತಿಪಕ್ಷಗಳು ಒಂದಾಗಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ತಿಳಿಸಿದ್ದರು.

click me!