ಮುಖ್ಯಮಂತ್ರಿ ವಸುಂಧರಾ ರಾಜೇ ಸ್ಪರ್ಧಿಸುತ್ತಿರುವ ಝಾಲಾರ್‌ಪಟಾನ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಹಾಗೂ ಮಾಜಿ ಬಿಜೆಪಿ ಶಾಸಕ ಮಾನವೇಂದ್ರ ಸಿಂಗ್ ಕಣಕ್ಕಿಳಿಯಲಿದ್ದಾರೆ.
ಜೈಪುರ[ನ.18]: ಡಿಸೆಂಬರ್ 7ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆ ರಂಗೇರತೊಡಗಿದ್ದು, ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಸ್ಪರ್ಧಿಸುತ್ತಿರುವ ಝಾಲಾರ್‌ಪಟಾನ್ ಕ್ಷೇತ್ರದಿಂದ ಮಾಜಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಹಾಗೂ ಮಾಜಿ ಬಿಜೆಪಿ ಶಾಸಕ ಮಾನವೇಂದ್ರ ಸಿಂಗ್ ಕಣಕ್ಕಿಳಿಯಲಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಜಸ್ವಂತ್ ಪುತ್ರನ ಹೆಸರಿದ್ದು, ಮುಖ್ಯಮಂತ್ರಿ ವಿರುದ್ಧ ಅವರು ಸ್ಪರ್ಧಿಸುತ್ತಿರುವ ಕಾರಣ ಸಹಜವಾಗೇ ಭಾರೀ ಕುತೂಹಲ ಮೂಡಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ಸಿ.ಪಿ. ಜೋಶಿ ಹಾಗೂ ಗಿರಿಜಾ ವ್ಯಾಸ್‌ರಂಥ ಘಟಾನುಘಟಿಗಳೂ ಸ್ಪರ್ಧಿಸುತ್ತಿದ್ದಾರೆ.
ರಾಜೇ ವ್ಯಂಗ್ಯ: ಬೇರೆ ಯಾವ ಅಭ್ಯರ್ಥಿಯೂ ಸಿಗದ ಕಾರಣ ಮಾನವೇಂದ್ರ ಅವರನ್ನು ನಿಲ್ಲಿಸಿ, ಅವರನ್ನು ಕಾಂಗ್ರೆಸ್ ಬಲಿಪಶು ಮಾಡುತ್ತಿದೆ ಎಂದು ವಸುಂಧರಾ ರಾಜೇ ವ್ಯಂಗ್ಯವಾಡಿದ್ದಾರೆ.