‘ಕೈ’ ತೆಕ್ಕಗೆ ಮತ್ತೊಂದು ರಾಜ್ಯ?: ಚುನಾವಣೆ ಹೊಸ್ತಿಲಲ್ಲಿ ಇದೇನಿದು ವ್ಯಾಜ್ಯ?

By Web DeskFirst Published Jan 13, 2019, 12:16 PM IST
Highlights

ಬಿಜೆಪಿ ಹಿಡಿತದಿಂದ ಮತ್ತೊಂದು ರಾಜ್ಯ ಕೈ ತಪ್ಪಲಿದೆಯಾ?| ಬಿಜೆಪಿಗೆ ಬಿಸಿತುಪ್ಪವಾಗಲಿದೆಯಾ ಪೌರತ್ವ ತಿದ್ದುಪಡಿ ಮಸೂದೆ?| ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ಅಸ್ಸೋಂ ಗಣ ಪರಿಷತ್ ವಿರೋಧ| ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಎಜಿಪಿ| ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲಾಗೆ ಬೆಂಬಲ ನೀಡಲು ಮುಂದಾದ ಕಾಂಗ್ರೆಸ್| ಬಿಜೆಪಿ ಸಖ್ಯ ತೊರೆಯುವಂತೆ ಸರ್ಬಾನಂದ ಸೊನೊವಾಲಾಗೆ ಕಾಂಗ್ರೆಸ್ ಒತ್ತಡ 

ದೀಸ್‌ಪುರ್(ಜ.13): ಬಿಜೆಪಿ ಸಖ್ಯ ತೊರೆದು ಹೊಸ ಸರ್ಕಾರ ರಚಿಸಲು ಮುಂದಾದರೆ ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲಾ ಅವರನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಅಸ್ಸೋಂ ಕಾಂಗ್ರೆಸ್ ಮುಖಂಡ ಡೆಬಬ್ರತಾ ಸೈಕಿಯಾ, ಸರ್ಬಾನಂದ ಸೊನೊವಾಲ್ ಬಿಜೆಪಿಯಿಂದ ಹೊರಗಡೆ ಬಂದರೆ ಅವರನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಾಗರಿಕ ತಿದ್ದುಪಡಿ ಮಸೂದೆ ಪ್ರತಿಭಟನೆಗೆ ಕಾರಣವಾಗಿದ್ದು, ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಿದ್ದರೆ ಮತ್ತೆ ಬಿಜೆಪಿ ಮೈತ್ರಿ ಸೇರುವುದಾಗಿ ಅಸ್ಸೋಂ ಗಣ ಪರಿಷತ್ ಈ ಹಿಂದೆ ಸ್ಪಷ್ಟಪಡಿಸಿತ್ತು.

ಸದ್ಯ ಎಜಿಪಿ ಮತ್ತು ಬಿಜೆಪಿ ನಡುವಿನ ವೈಮನಸ್ಸನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್, ಸರ್ಬಾನಂದ ಸೊನೊವಾಲಾ ಅವರಿಗೆ ಬಿಜೆಪಿ ಸಖ್ಯ ತೊರೆಯುವಂತೆ ಒತ್ತಡ ಹೇರುತ್ತಿದೆ.

126 ಸದಸ್ಯ ಬಲದ ಅಸ್ಸೋಂ ವಿಧಾನಸಭೆಯಲ್ಲಿ ಕಾಂಗ್ರೆಸ್ 25 ಶಾಸಕರನ್ನು ಹೊಂದಿದ್ದು, ಹೊಸ ಸರ್ಕಾರ ರಚನೆಗೆ ಎಜಿಪಿ ಜೊತೆಗೆ ಇತರ ಪಕ್ಷಗಳ ಬೆಂಬಲ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಡೆಬಬ್ರತಾ ಸೈಕಿಯಾ ಹೇಳಿದ್ದಾರೆ.

click me!