ಆರ್‌ಆರ್‌ ನಗರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಫೈಟ್‌

First Published May 26, 2018, 8:40 AM IST
Highlights

ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಹೊಂದಾಣಿಕೆ ಕುರಿತು ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸಂಧಾನ ಬಹುತೇಕ ವಿಫಲವಾಗಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರು :  ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಹೊಂದಾಣಿಕೆ ಕುರಿತು ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸಂಧಾನ ಬಹುತೇಕ ವಿಫಲವಾಗಿದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಹಾಗೂ ಉಭಯ ಪಕ್ಷಗಳ ಕ್ಷೇತ್ರದ ನಾಯಕರ ನಡುವೆ ಹೊಂದಾಣಿಕೆ ಕುರಿತು ಸುದೀರ್ಘ ಮಾತುಕತೆಯನ್ನು ನಡೆಸಿದ್ದರೂ, ಪ್ರಯೋಜನವಾಗಿಲ್ಲ. ಸಭೆಯಲ್ಲಿ ಜೆಡಿಎಸ್‌, ಜಯನಗರ ಕ್ಷೇತ್ರ ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತೇವೆ, ಆರ್‌.ಆರ್‌. ನಗರ ಜೆಡಿಎಸ್‌ಗೆ ಬಿಟ್ಟುಕೊಡಿ ಎಂದು ಪ್ರಸ್ತಾಪಿಸಿದೆ. ಇದಕ್ಕೆ ಕಾಂಗ್ರೆಸ್‌ ಮುಖಂಡರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲಿಸಬೇಕು. ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಅವರನ್ನು ಕಣದಿಂದ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.

ಆದರೆ, ಇದಕ್ಕೆ ಒಪ್ಪದ ಜೆಡಿಎಸ್‌ ನಾಯಕರು ಮುನಿರತ್ನ ವಿರುದ್ಧ ಚುನಾವಣಾ ಗುರುತಿನ ಚೀಟಿ ಆರೋಪ ಇದೆ. ಹೀಗಾಗಿ ಮುನಿರತ್ನ ಅವರಿಗಿಂತ ರಾಮಚಂದ್ರಗೆ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ವಾದಿಸಿದರು ಎನ್ನಲಾಗಿದೆ. ಎರಡೂ ಪಕ್ಷಗಳ ನಾಯಕರು ತಮ್ಮ ಪಟ್ಟಿಗೆ ಅಂಟಿಕೊಂಡ ಕಾರಣ ಉಭಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹೀಗಾಗಿ ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡೂ ಸಹ ತಮ್ಮ ಅಭ್ಯರ್ಥಿಗಳನ್ನು ಕಣದಲ್ಲೇ ಮುಂದುವರೆಸುವ ಸಾಧ್ಯತೆ ಇದೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಗೆದ್ದು ಬಂದಿದ್ದಾರೆ. ಇದು ಕಾಂಗ್ರೆಸ್‌ ಕ್ಷೇತ್ರವಾದ್ದರಿಂದ ನಮಗೆ ಬಿಟ್ಟು ಕೊಡುವಂತೆ ಚರ್ಚೆ ಮಾಡಿದ್ದೇವೆ. ಆದರೆ ಈವರೆಗೂ ಅಂತಿಮ ನಿರ್ಧಾರ ತಿಳಿಸಿಲ್ಲ. ಒಂದು ವೇಳೆ ತಮ್ಮ ಅಭ್ಯರ್ಥಿಯನ್ನು ಅವರು ಹಿಂದಕ್ಕೆ ಪಡೆಯದಿದ್ದರೆ, ನಮ್ಮ ಅಭ್ಯರ್ಥಿಯೂ ಕಣದಲ್ಲಿ ಮುಂದುವರೆಯುತ್ತಾರೆ.

- ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ನಾಯಕ

click me!