ಮೋದಿ ಕೌಂಟ್‌ ಡೌನ್‌ ಶುರು: ಸಿದ್ದರಾಮಯ್ಯ

By Suvarna Web DeskFirst Published Mar 16, 2018, 10:37 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಕೌಂಟ್‌ಡೌನ್‌ (ಕ್ಷಣಗಣನೆ) ಶುರುವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 100ಕ್ಕೆ 100ರಷ್ಟುಬಿಜೆಪಿ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚಿತ್ರದುರ್ಗ/ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರ ಕೌಂಟ್‌ಡೌನ್‌ (ಕ್ಷಣಗಣನೆ) ಶುರುವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 100ಕ್ಕೆ 100ರಷ್ಟುಬಿಜೆಪಿ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಗೆದ್ದು ದೇಶದ ಚುಕ್ಕಾಣಿ ಹಿಡಿಯಲಿವೆ. ರಾಜ್ಯದಲ್ಲೂ ಜನತೆ ಮತ್ತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಅಲ್ಲಿ ಸಲ್ಲದವನು ಇಲ್ಲಿ ಸಲ್ಲನಯ್ಯ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದು ಪಾಠ ಹೇಳುತ್ತಿದ್ದರು. ಅವರ ಸ್ವಂತ ರಾಜ್ಯದಲ್ಲೇ ಈಗ ಬಿಜೆಪಿ ಹಳಸಿಕೊಂಡಿದೆ. ಸಿಎಂ, ಡಿಸಿಎಂ ಕ್ಷೇತ್ರಗಳಲ್ಲೇ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದ ಸಿಎಂ, ‘ಅಲ್ಲಿ ಸಲ್ಲದವನು ಇಲ್ಲಿ ಸಲ್ಲನಯ್ಯ, ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲನಯ್ಯ’ ಎಂದು ಮಾರ್ಮಿಕವಾಗಿ ನುಡಿದರು.

ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ. ಇಲ್ಲಿ ಸಲ್ಲುವವರು ಮುಂದೆ ಲೋಕಸಭೆಯಲ್ಲೂ ಸಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಒಂದು ವರ್ಷದಲ್ಲೇ ಬಿಜೆಪಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಹಿಂದುತ್ವ ಪಸರಿಸಲು ಹೊರಟಿದ್ದಾರೆ. ಅದೆಲ್ಲ ಇಲ್ಲಿ ನಡೆಯೋದಿಲ್ಲ. ಉತ್ತರ ಪ್ರದೇಶದಲ್ಲೇ ನಡೆಯಲಿಲ್ಲ ಎಂದ ಮೇಲೆ ಇಲ್ಲಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲೂ ಸುಮಾರು .200 ಕೋಟಿ ವೆಚ್ಚದ ನಾನಾ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿಎಂ ಅವರು, ಯಡಿಯೂರಪ್ಪ ಸೇರಿದಂತೆ ಸಾಲು ಸಾಲು ನಾಯಕರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದು, ಇಂತಹವರ ಮುಂದೆ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಮಾತನಾಡಲು ಮೋದಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಜತೆಗೆ, ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. 25 ಸ್ಥಾನ ಗೆಲ್ಲಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಜೆಡಿಎಸ್‌ ಇದ್ದು, ಈ ಭಾಗದ ದಾಹ ತೀರಿಸುವ ಎತ್ತಿನಹೊಳೆ ಯೋಜನೆಯನ್ನೇ ನಿಲ್ಲಿಸುವ ಮಾತಾಡುವ ಕುಮಾರಸ್ವಾಮಿಯವರು ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿದ್ದೇನೆ ಎನ್ನುತ್ತಾರೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತು ಹತಾಶರಾಗಿರುವ ಅಪ್ಪ ಮಕ್ಕಳು ನನ್ನನ್ನು ಬೈಯ್ಯುತ್ತಾ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಂತರ ಹೊಸದುರ್ಗದಲ್ಲಿ .399 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಯಡಿಯೂರಪ್ಪ ಮಾತೆತ್ತಿದರೆ ಸಾಕು ಹೆಗಲ ಮೇಲೆ ಹಸಿರು ಟವಲ… ಹಾಕಿಕೊಂಡು ರೈತನ ಮಗ ಎನ್ನುತ್ತಾರೆ. ಮತ್ತೊಬ್ಬರು ಮಣ್ಣಿನ ಮಗನಂತೆ. ಹಾಗಾದರೆ ನಾವು ಯಾರ ಮಕ್ಕಳಪ್ಪ? ನೀವು ಯಾರ ಮಕ್ಕಳು ಎಂದು ಸಭಿಕರತ್ತ ಬೆರಳು ತೋರಿಸಿ ಪ್ರಶ್ನಿಸಿದ ಸಿಎಂ, ನಾವೂ ರೈತರ ಮಕ್ಕಳೇ. ಪಾಪ ಇದು ಯಡಿಯೂರಪ್ಪಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

click me!