
ಮೈಸೂರು(ಸೆ.02): ಮೈಸೂರು ರಾಜ ವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸಿಎಂ ಸಿದ್ದರಾಮಯ್ಯ ಏಕವಚನದಿಂದ ಮಾತನಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ಮೈಸೂರಿನ ಮೇಯರ್ ಸಿಎಂ ಮನೆಯಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ವೇಳೆ ಸಿಎಂ ಸಿದ್ದರಾಮಯ್ಯ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಬಗ್ಗೆ ಏಕ ವಚನ ಪ್ರಯೋಗಿಸಿದ್ದಾರೆ. ಇದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೇವರಾಜ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು. ಅಲ್ಲಿ ವ್ಯಾಪಾರ ಮಾಡುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಜಾಗವನ್ನು ಕೊಟ್ಟಿದ್ದಾರೆ ಎಂದು ಮೇಯರ್ ರವಿಕುಮಾರ್ ಸಿಎಂಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವನು ರಾಜ, ಕೊಟ್ಟ, ರಾಜ ಏನ್ ಅವರ ಮನೆಯಿಂದ ಏನ್ ಕೊಟ್ಟಿಲ್ಲ. ಅದೂ ಸರ್ಕಾರವೇ ಜನರ ಆಸ್ತಿ ಅದು ಅಂತ ಹೇಳಿದ್ದಾರೆ.
ಸಂಭಾಷಣೆಯಲ್ಲಿ ಹೇಳಿದ್ದೇನು?
ಸಿಎಂ: ಅವನು ರಾಜ, ಕೊಟ್ಟ. ರಾಜ ಏನ್ ಅವರ ಮನೆಯಿಂದ ಏನ್ ಕೊಟ್ಟಿಲ್ಲ. ಅದೂ ಸರ್ಕಾರವೇ. ಜನರ ಆಸ್ತಿ ಅದು. ನಿಮಗೆ ಮಹಾರಾಜ ಅಂದರೆ ದೇವರ ರೀತಿ ಆಗೋಗಿದೆ. ಮಹಾರಾಜರು ಅಂದ್ರೆ ಸರ್ಕಾರ ಮಾಡ್ತಿದ್ರು. ನಮ್ದು ಜನರ ಸರ್ಕಾರಾನೇ. ಈಗ ಚುನಾಯಿತ ಸರ್ಕಾರ. ಆಗ ಚುನಾವಣೆ ಇಲ್ದೇ ವಂಶ ಪಾರಂಪರ್ಯವಾಗಿ ನಡೀತಾಯಿತ್ತು. ಆಗ ಮಹಾರಾಜರ ಬಗ್ಗೆ ತುಂಬಾ ಗೌರವ ಇಟ್ಕೊಳ್ತಿದ್ವಿ. ಈಗ ಚುನಾಯಿತ ಸರ್ಕಾರ ಇದೆ. ಮಹಾರಾಜ ಕೊಟ್ಟ ಅಂದ್ರೆ, ಕೊಡ್ಲೇಬೇಕಾಗಿತ್ತು. ಇನ್ನೇನು ಅವ್ನೇ ತಿಂದ್ಕೊಳ್ಳೋಕಾಗುತ್ತಾ.
ಪಾಲಿಕೆ ಸದಸ್ಯೆ: ನಮಗೆ ನೀವೇ ಮಹಾರಾಜರಿದ್ದ ಹಾಗೆ
ಸಿಎಂ: ನಾನು ಮಹಾರಾಜ ಅಲ್ಲ. ಆಗ ಮಹಾರಾಜ ಮಾಡಿದ್ದೇ ವೇದವಾಕ್ಯ. ನಾವು ಜನಪ್ರತಿನಿಧಿಗಳು ಹಾಗೆ ಮಾಡುವುದಕ್ಕೆ ಆಗುವುದಿಲ್ಲ, ಹಾಗೆ ಮಾಡಿದರೆ ಜನ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಮಹಾರಾಜರ ಬಗ್ಗೆ ಜನರಿಗೆ ಅಪಾರ ಗೌರವ ಇತ್ತು, ಯಾರೊಬ್ಬರು ಅವರನ್ನು ಪ್ರಶ್ನಿಸುತ್ತಿರಲಿಲ್ಲ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.