
ಬೆಂಗಳೂರು (ಜೂ. 01): ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ಆರಂಭಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ತಮ್ಮನ್ನು ಭೇಟಿ ಮಾಡಿದ ಅಮೆರಿಕ ರಾಯಭಾರಿ ಕಚೇರಿಯ ನಿಯೋಗದ ಮುಂದೆ ಪ್ರಸ್ತಾಪವಿಟ್ಟಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್, ಚೆನ್ನೈ ಅಮೆರಿಕ ಕಾನ್ಸುಲ್ ಜನರಲ್ ರಾಬರ್ಟ್ ಜಿ. ಬರ್ಗಸ್, ರಾಜಕೀಯ ಹಾಗೂ ಆರ್ಥಿಕ ಅಧಿಕಾರಿ ಜೋಸೆಫ್ ಬರ್ನಥ್, ಸಾರ್ವಜನಿಕ ವ್ಯವಹಾರ ಅಧಿಕಾರಿ ಲಾರೆನ್ ಲವಲೇಸ್ ಅವರನ್ನು ಒಳಗೊಂಡ ನಿಯೋಗವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ನಿಯೋಗದ ಸೌಜನ್ಯ ಭೇಟಿ ವೇಳೆ, ಬೆಂಗಳೂರಿನಿಂದ ಅಮೆರಿಕಗೆ ಉದ್ಯೋಗ, ಶಿಕ್ಷಣ, ವ್ಯವಹಾರ ಹಾಗೂ ಪ್ರವಾಸಕ್ಕಾಗಿ ಹೆಚ್ಚು ಜನ ತೆರಳುತ್ತಾರೆ. ಹೀಗಾಗಿ ತಕ್ಷಣ ಕಚೇರಿ ಆರಂಭಿಸುವುದು ಅಗತ್ಯ. ಇದಕ್ಕಾಗಿ ನಿಮಗೆ ಬೇಕಾಗಿರುವ ಎಲ್ಲಾ ನೆರವನ್ನೂ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ರಾಯಭಾರ ಕಚೇರಿ ಆರಂಭಿಸಲು ಅಗತ್ಯ ಜಾಗ, ಮೂಲ ಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಪ್ರವಾಸಿ ವೀಸಾದ ಅಡಿ ಅಮೆರಿಕಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ನಾವು ಮುಂದಿದ್ದೇವೆ. ವಿವಿಧ ರೀತಿಯ ವೀಸಾ ಅಡಿ ಅಮೆರಿಕಗೆ ಭೇಟಿ ನೀಡುತ್ತಿರುವವರಿಗೆ ಇಲ್ಲಿಯೇ ಕಚೇರಿಯನ್ನು ಆರಂಭಿಸುವುದರಿಂದ ಸಹಾಯವಾಗಲಿದೆ ಎಂದು ವಿವರಣೆ ನೀಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಯಭಾರಿ ಜಸ್ಟರ್, ಈ ಬಗ್ಗೆ ಉನ್ನತ ಹಂತದಲ್ಲಿ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು. ಜತೆಗೆ ಬೆಂಗಳೂರಿನಲ್ಲಿ ಸುಮಾರು 370 ಅಮೆರಿಕ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಕಂಪನಿಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸೂಕ್ತ ಕೊಡುಗೆಯನ್ನೂ ನೀಡುತ್ತಿವೆ. ಇವುಗಳಿಗೆ ಮೂಲಭೂತ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರ ಗಮನ ಕೊಡಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಿಯೋಗ ಪಟ್ಟಿಮಾಡಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹಾರ ಒದಗಿಸುವಂತೆ ಸಭೆಯಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಮೆಟ್ರೋ ರೈಲು ವ್ಯವಸ್ಥೆ, ಹೆದ್ದಾರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಬೆಂಗಳೂರು ನಗರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಿಯೋಗಕ್ಕೆ ಮನವರಿಕೆ ಮಾಡಿದರು. ಪ್ರವಾಸೋದ್ಯಮ ಹಾಗೂ ಮಾಹಿತಿ, ಜೈವಿಕ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದಲ್ಲಿ ಅಮೆರಿಕ ಹಾಗೂ ಕರ್ನಾಟಕದ ನಡುವಣ ಸಂಬಂಧ ಉತ್ತಮವಾಗಿದೆ ಎಂದು ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ಆರಂಭಿಸಬೇಕಾದ ಅನಿವಾರ್ಯತೆಯ ಬಗ್ಗೆ ಪೂರಕ ಅಂಶಗಳೊಂದಿಗೆ ವಿವರಣೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.