ಸರ್ಕಾರ ಅಸ್ಥಿರ ಯತ್ನಕ್ಕೆ ಬ್ರೇಕ್ ಹಾಕಲು ಸಿಎಂ ಸೀಕ್ರೇಟ್ ಮಾತುಕತೆ

By Web DeskFirst Published Sep 17, 2018, 10:08 AM IST
Highlights

ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಳಿಸುವ ಯತ್ನ ನಡೆಯುತ್ತಿವೆ ಎನ್ನುವ ಚರ್ಚೆ ನಡುವೆಯೇ ಇದಕ್ಕೆ ಸಹಾಯ ಮಾಡುತ್ತಿರುವವರಿಗೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಪಶ್ಚಿಮ  ವಲಯದ ಐಜಿಪಿಯಾಗಿರುವ  ಅಲೋಕ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. 

ಬೆಂಗಳೂರು: ತಮ್ಮ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾದ ಕಿಂಗ್‌ಪಿನ್‌ಗಳನ್ನು ಮಟ್ಟ ಹಾಕಲು ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದು, ಈ ಸಂಬಂಧ ಬೆಂಗಳೂರು ಅಪರಾಧ ವಿಭಾಗದ ನೂತನ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿರುವ ಅಲೋಕ್ ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ. 

ಶನಿವಾರ ಬೆಳಗಾವಿಗೆ ತೆರಳಿದ್ದ ವೇಳೆ ಸದ್ಯ ಅಲ್ಲಿಯೇ ಪಶ್ಚಿಮ  ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಅವರೊಂದಿಗೆ ಕುಮಾರಸ್ವಾಮಿ ಅವರು ಕೆಲ ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ. ರಾಜಧಾನಿ ಬೆಂಗಳೂರಿಗೆ ಬಂದು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಗರದಲ್ಲಿ ಹೆಚ್ಚುತ್ತಿರುವ ಇಸ್ಪೀಟ್ ಜೂಜು, ಅಕ್ರಮ ಲಾಟರಿ ದಂಧೆ, ಹೈಟೆಕ್ ವೇಶ್ಯಾವಾಟಿಗೆ, ಮೀಟರ್ ಬಡ್ಡಿ ಮಾಫಿಯಾಗಳಲ್ಲಿ ತೊಡಗಿಸಿಕೊಂಡವರಿಗೆ ಬುದ್ಧಿ ಕಲಿಸುವ ಮೂಲಕ ಕಡಿವಾಣ ಹಾಕಬೇಕು. ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳದೆ,  ಯಾವುದೇ ಮುಲಾಜು ನೋಡದೆ ಕಠಿಣ ಕ್ರಮ ಕೈಗೊಳ್ಳಿ. 

ನಿಮಗೆ ಬೇಕಾದ ಎಲ್ಲ  ಸಹಕಾರ ನೀಡಲಾಗುವುದು ಎಂಬ ಮಾತನ್ನು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹುನ್ನಾರ ನಡೆಸಿದ್ದಾರೆ ಎನ್ನಲಾದ ಕಿಂಗ್‌ಪಿನ್‌ಗಳಿಗೆ ನಡುಕ ಉಂಟಾಗಿದೆ. ಅಲೋಕ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಕಾರ್ಯಾರಂಭ ಮಾಡಲಿದ್ದಾರೆ ಎನ್ನಲಾಗಿದೆ.

click me!