ರೈತರಿಗೆ ಮುಖ್ಯಮಂತ್ರಿ ಕೊಟ್ಟ ಶುಭ ಸುದ್ದಿ ಇದು

By Web DeskFirst Published Sep 27, 2018, 8:00 AM IST
Highlights

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇದೀಗ ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಮುಂದಿನ ಡಿಸೆಂಬರ್ 31ರ ಒಳಗೆ  ಋಣಮುಕ್ತ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ. 

ಮಂಡ್ಯ :  ಭತ್ತದ ಪೈರು ನಾಟಿ ಮಾಡುವ ಸಲುವಾಗಿ ಕಳೆದ ತಿಂಗಳಷ್ಟೇ ಮಂಡ್ಯಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬುಧವಾರ ಮತ್ತೆ ಸಕ್ಕರೆ ನಾಡಿಗೆ ಆಗಮಿಸಿ ಸಾರ್ವಜನಿಕರ ಕಷ್ಟ-ಸುಖ ಆಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರ ಸಹೋದರ, ಸಚಿವ ರೇವಣ್ಣ ಸಾಥ್‌ ನೀಡಿದರು. ಮಧ್ಯಾಹ್ನ 3.30ರ ವೇಳೆಗೆ ಮಂಡ್ಯದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಕುಮಾರಸ್ವಾಮಿ, ಪೊಲೀಸ್‌ ಇಲಾಖೆಯಿಂದ ಗೌರವ ಸ್ವೀಕರಿಸಿ ನೇರವಾಗಿ ಜನರ ಬಳಿ ತೆರಳಿ ಅಹವಾಲು ಸ್ವೀಕರಿಸಿದರು.

ಪೂರ್ವ ನಿಗದಿಯಂತೆ ಮುಖ್ಯಮಂತ್ರಿಗಳು ಊಟವಾದ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಬೇಕಿತ್ತು. ಆದರೆ, ಊಟ ಮಾಡುವ ಬದಲು ತಮಗಾಗಿ ಕಾದು ಕುಳಿತಿದ್ದ ಜನರ ಬಳಿ ತೆರಳಿ ಅವರ ಕುಂದು-ಕೊರತೆ ಆಲಿಸಿದರು. ಈ ವೇಳೆ ಋುಣಮುಕ್ತ ಪತ್ರ ನೀಡುವಂತೆ ರೈತ ಸಂಘದ ಕಾರ್ಯಕರ್ತರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಡಿ.31ರೊಳಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಋುಣಮುಕ್ತ ಪತ್ರ ನೀಡುವ ಭರವಸೆ ನೀಡಿದರು.

ನಂದೀಶ್‌ನ ಕುಟುಂಬಕ್ಕೆ 2 ಲಕ್ಷ ಚೆಕ್‌:  ಸಾಲಬಾಧೆಯಿಂದ ಇತ್ತೀಚೆಗೆ ಪತ್ನಿ, ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರಿನ ನಂದೀಶ್‌ ಅವರ ತಂದೆ-ತಾಯಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ, ಕೃಷಿ ಇಲಾಖೆ ವತಿಯಿಂದ .2 ಲಕ್ಷ ಪರಿಹಾರದ ಚೆಕ್‌ ಹಸ್ತಾಂತರಿಸಿದರು. ನಂದೀಶ್‌ ಸೇರಿದಂತೆ ಪತ್ನಿ, ಮಕ್ಕಳು ಎಲ್ಲರೂ ದುಡುಕಿನ ನಿರ್ಧಾರ ಕೈಗೊಂಡರು. ಸ್ವಲ್ಪ ತಾಳ್ಮೆ ವಹಿಸಿದ್ದರೆ ಅವರ ಸಮಸ್ಯೆಗೆ ಸಂಪೂರ್ಣ ಪರಿಹಾರ ಸೂಚಿಸುತ್ತಿದ್ದೆ. ಅಷ್ಟರಲ್ಲೇ ಅವರು ಬದುಕಿಗೆ ವಿದಾಯ ಹೇಳಿದ್ದು ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧಿಸಿರುವ ಪ್ರಗತಿ ವರದಿ ಬೇಡ:  ಇದಾದ ಬಳಿಕ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, 10 ವರ್ಷಗಳಿಂದ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ, ಮಂಡ್ಯದ ಸಮಗ್ರ ಅಭಿವೃದ್ಧಿಗೆ .1000 ಕೋಟಿ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹೂ ಮಾರುವ ಬಾಲಕಿಯ ವಿದ್ಯಾಭ್ಯಾಸ ಹೊಣೆ ನನ್ನದು: 
ಇನ್ನು ಮುಖ್ಯಮಂತ್ರಿ ಬರುವ ಸುದ್ದಿ ಕೇಳಿ ಬೆಳಗ್ಗಿನಿಂದಲೇ ತನ್ನ ತಾಯಿಯೊಂದಿಗೆ ಕಾದು ಕುಳಿತಿದ್ದ ಶ್ರೀರಂಗಪಟ್ಟಣದ ಬೆಳಗೊಳದ ಹೂ ಮಾರುವ ಬಾಲಕಿ ಶಬಾಬ್‌ತಾಜ್‌ಳನ್ನು ಮಾತನಾಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಶಬಾಬ್‌ತಾಜ್‌ಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಆಕೆಯ ಕುಟುಂಬಕ್ಕೆ ಮನೆಯ ಅಗತ್ಯವಿದೆ. ಇದಕ್ಕಾಗಿ ಆರ್ಥಿಕ ನೆರವನ್ನೂ ನೀಡಲಿದ್ದೇನೆ . ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಗಮನಕ್ಕೆ ತಂದಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಹೂ ಮಾರುವ ಬಾಲಕಿಗೆ ಸಿಎಂರಿಂದ ಇನ್ನೂ ನೆರವು ಸಿಕ್ಕಿಲ್ಲ ಎಂದು ಬುಧವಾರವಷ್ಟೇ ‘ಕನ್ನಡಪ್ರಭ’ ವರದಿ ಮಾಡಿತ್ತು.
ಸೂಪರ್‌ ಸಿಎಂ ಆದ ರೇವಣ್ಣ

ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳಿಗಿಂತ ಅವರ ಸಹೋದರ ರೇವಣ್ಣ ಅವರೇ ಹೆಚ್ಚು ಗರ್ಜಿಸಿದರು. ಉತ್ತರ ಕೊಡಲು ತಡವರಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೇವಣ್ಣ ಸೂಪರ್‌ ಸಿಎಂ ರೀತಿ ‘ಸಭೆಗೆ ಬಾರದವರನ್ನು ಬಲಿ ಹಾಕಿ’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟರು.

ಮುಖ್ಯಮಂತ್ರಿಗಳು ಸಭೆ ನಡೆಸುತ್ತಾರೆ ಎಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ಯಾಕೆ ಈ ರೀತಿ ವರ್ತನೆ ಮಾಡುತ್ತಾರೆ. ನೀವು ಮೊದಲೇ ಸ್ಪಷ್ಟಆದೇಶ ನೀಡಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಸಭೆಗೆ ಬಾರದ ಯಾವುದೇ ಅಧಿಕಾರಿ ಇದ್ದರೂ ಪಟ್ಟಿಮಾಡಿ ಅಮಾನತುಗೊಳಿಸಿ ಮುಲಾಜು ನೋಡಬಾರದು ಎಂದು ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್‌ ಅವರಿಗೆ ಆದೇಶ ನೀಡಿದರು.

ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

ಊಟ ಮುಗಿಸಿ ಮುಖಂಡರೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜೆಡಿಎಸ್‌ನ ಮಹಿಳಾ ಕಾರ್ಯಕರ್ತೆಯರು ತಾ ಮುಂದು ನಾ ಮುಂದು ಎಂದು ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

click me!