ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!| ಕಾಂಗ್ರೆಸ್ ಸಭೆಯಲ್ಲಿ ಬಿರುಸಿನ ವಾಗ್ವಾದ| ರಮೇಶ್ ಕುಮಾರ್ ವಿರುದ್ಧ ಕ್ರಮ ಏಕಿಲ್ಲ? ಮುನಿಯಪ್ಪ ಗರಂ| ಕೋಲಾರದಲ್ಲಿ ತಮ್ಮ ಸೋಲಿಗೆ ರಮೇಶ್ ಕಾರಣವೆಂದು ಮುನಿಯಪ್ಪ ಕೆಂಡ| ರೋಷನ್ ಬೇಗ್ ವಿರುದ್ಧ ಮಾತ್ರ ಕ್ರಮ ಕೈಗೊಂಡುದಕ್ಕೆ ತೀವ್ರವಾಗಿ ಆಕ್ಷೇಪ| ಇದಕ್ಕೆ ಬಿ.ಕೆ.ಹರಿಪ್ರಸಾದ್ ಸಾಥ್. ಇದೆಲ್ಲದರಿಂದ ಕ್ರುದ್ಧರಾದ ಸಿದ್ದರಾಮಯ್ಯ| ಸರಿಯಾಗಿ ಮಾತಾಡಲು ಮುನಿಯಪ್ಪಗೆ ತಾಕೀತು. ಬಳಿಕ ಏಕವಚನದಲ್ಲಿ ಬೈದಾಟ
ಬೆಂಗಳೂರು[ಸೆ.27]: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಮೂಲ ಕಾಂಗ್ರೆಸ್ಸಿಗರಿಗೆ ಇದ್ದ ಒಳಬೇಗುದಿ ಗುರುವಾರ ಸ್ಫೋಟಗೊಂಡಿದ್ದು, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತುಂಬಿದ ಸಭೆಯಲ್ಲಿ ರಾಜ್ಯ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಈ ಘಟನೆ ನಡೆದಿದ್ದು, ಒಂದು ಹಂತದಲ್ಲಿ ರಾಜ್ಯ ಕಾಂಗ್ರೆಸ್‌ನ ಈ ಹಿರಿಯ ನಾಯಕರು ಪರಸ್ಪರ ಏಕವಚನ ಬಳಸಿ ವಾಗ್ವಾದ ಕೂಡ ನಡೆಸಿದ್ದು, ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುನಿಯಪ್ಪ ಅವರು ಪರಸ್ಪರ ಏಕವಚನ ಬಳಸಿ ಆರೋಪ-ಪ್ರತ್ಯಾರೋಪ ನಡೆಸಿದಾಗ ಇಡೀ ಸಭೆ ಕಂಗಾಲಾಯಿತು. ಆಗ ವೇಣುಗೋಪಾಲ್ ಅವರು ಕೋಪೋದ್ರಿಕ್ತರಾಗಿದ್ದ ಸಿದ್ದರಾಮಯ್ಯ ಹಾಗೂ ಮುನಿಯಪ್ಪ ಅವರನ್ನು ಸಂಭಾಳಿಸಲು ಹೆಣಗಬೇಕಾಯಿತು ಎಂದು ಮೂಲಗಳು ಹೇಳಿವೆ.
ಸಭೆ ಆರಂಭವಾಗುತ್ತಿದ್ದಂತೆಯೇ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮೇಲೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಿನಿಂದ ಪ್ರಶ್ನಿಸಿದರು ಎನ್ನಲಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಈ ಸಭೆಯನ್ನು ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಆಖೈರುಗೊಳಿಸಲು ಕರೆಯಲಾಗಿದೆ. ಹೀಗಾಗಿ ವಿಷಯಾಂತರ ಮಾಡುವುದು ಬೇಡ ಎಂದು ಮುನಿಯಪ್ಪ ಅವರಿಗೆ ತಿಳಿಸಿದರು ಎನ್ನಲಾಗಿದೆ.
ಆದರೂ, ಪಟ್ಟು ಬಿಡದ ಮುನಿಯಪ್ಪ ರಮೇಶ್ ಕುಮಾರ್ ಅವರನ್ನು ವಾಚಾಮಗೋಚರವಾಗಿ ತೆಗಳುತ್ತಾ, ನನ್ನ ಸೋಲಿಗೆ ನೇರ ಪ್ರಯತ್ನ ನಡೆಸಿದ ಹಾಗೂ ಬಿಜೆಪಿ ಜತೆ ಸೇರಿ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ ರಮೇಶ್ ಕುಮಾರ್ ಮೇಲೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಇಂತಹ ಪಕ್ಷದ್ರೋಹಿಯನ್ನು ಜತೆಯಲ್ಲಿಟ್ಟುಕೊಂಡು ನೀವು ತಿರುಗುತ್ತೀರಾ ಎಂದು ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು ಎನ್ನಲಾಗಿದೆ.
ಈ ವೇಳೆ ಸಿದ್ದರಾಮಯ್ಯ ಅವರು, ರಮೇಶ್ ಕುಮಾರ್ ನನ್ನ ಹಳೆಯ ಸ್ನೇಹಿತ. ಹಿಂದೆಯೂ ನನ್ನ ಜತೆಯಿದ್ದರು, ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ. ಅದನ್ಯಾಕೆ ಪ್ರಶ್ನಿಸುತ್ತೀರಾ ಎಂದರು ಎನ್ನಲಾಗಿದೆ.
ಇದರಿಂದ ಕೆಂಡಾಮಂಡಲರಾದ ಮುನಿಯಪ್ಪ ಅವರು, ನಿಮ್ಮ ವಿರುದ್ಧ ಮಾತನಾಡಿದ ರೋಷನ್‌ಬೇಗ್ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದೀರಾ? ಆದರೆ, ನಮ್ಮ ಸೋಲಿಗೆ ಕಾರಣರಾದವರನ್ನು ಜತೆಯಲ್ಲಿಟ್ಟುಕೊಂಡು ಓಡಾಡುತ್ತೀರಲ್ಲ, ಇದು ಎಷ್ಟುಸರಿ? ಈ ಬಗ್ಗೆ ನಾನು ಸಾಕ್ಷ್ಯಸಮೇತ ಕೆಪಿಸಿಸಿಗೆ ಹಾಗೂ ಎಐಸಿಸಿಗೆ ದೂರು ನೀಡಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರಲ್ಲದೆ, ರಾಜ್ಯ ನಾಯಕತ್ವವನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಸಭೆಯಲ್ಲಿದ್ದ ನಾಯಕರು ಎಷ್ಟುಹೇಳಿದರೂ ಸಮಾಧಾನಗೊಳ್ಳುವ ಮನಸ್ಥಿತಿಯಲ್ಲಿ ಮುನಿಯಪ್ಪ ಇರಲಿಲ್ಲ ಎನ್ನಲಾಗಿದೆ. ಇದರ ಜತೆಗೆ, ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಸಹ ಮುನಿಯಪ್ಪ ಅವರಿಗೆ ಸಾಥ್ ನೀಡಿ, ರಾಜ್ಯ ನಾಯಕತ್ವವು ಹಿರಿಯ ನಾಯಕರನ್ನು ಕಡೆಗಣಿಸಿ ಏಕ ಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು ಎನ್ನಲಾಗಿದೆ.
ಇದರಿಂದ ಮುನಿಯಪ್ಪ ಮತ್ತಷ್ಟುತೀವ್ರವಾಗಿ ವಾಗ್ದಾಳಿ ಮುಂದುವರೆಸಿದ್ದು, ಆಗ ಕ್ರುದ್ಧರಾದ ಸಿದ್ದರಾಮಯ್ಯ ಅವರು ಒಂದು ಹಂತದಲ್ಲಿ ಸರಿಯಾಗಿ ಮಾತನಾಡುವಂತೆ ತಾಕೀತು ಮಾಡಿದಾಗ ಸಂಯಮ ಕಳೆದುಕೊಂಡ ಮುನಿಯಪ್ಪ ಏಕವಚನದಲ್ಲೇ ಸಿದ್ದರಾಮಯ್ಯ ಮೇಲೆ ವಾಗ್ದಾಳಿಗೆ ಇಳಿದರು ಎನ್ನಲಾಗಿದೆ. ಉಭಯ ನಾಯಕರು ಹೀಗೆ ಏಕವಚನದಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದರಿಂದ ಇಡೀ ಸಭೆ ಮಂಕು ಬಡಿದಂತೆ ಕುಳಿತಿತ್ತು ಎಂದು ಮೂಲಗಳು ತಿಳಿಸಿವೆ.
ಮುನಿಯಪ್ಪ ಅವರ ಉಗ್ರರೂಪದಿಂದ ಬೇಸತ್ತ ಸಿದ್ದರಾಮಯ್ಯ ಒಂದು ಹಂತದಲ್ಲಿ ಸಭೆಯಿಂದ ಹೊರನಡೆಯಲು ಮುಂದಾದರು ಎನ್ನಲಾಗಿದ್ದು, ಈ ವೇಳೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ಸಭೆಯಿಂದ ಹೊರಹೋಗದಂತೆ ತಡೆದರು. ಸಭೆಯಲ್ಲಿ ತೀವ್ರ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮುನಿಯಪ್ಪ ಹಾಗೂ ಹರಿಪ್ರಸಾದ್ ಕೆಲ ಕಾಲ ಸಭೆಯಿಂದ ಹೊರನಡೆದಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಇದಾದ ನಂತರ ಉಭಯ ನಾಯಕರು ಸಭೆಗೆ ಹಿಂತಿರುಗಿದರೂ ಏನನ್ನೂ ಮಾತನಾಡಲಿಲ್ಲ. ಆಗ ಸಭೆಯು ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಕಸರತ್ತನ್ನು ಮುಂದುವರೆಸಿತು ಎಂದು ಮೂಲಗಳು ಹೇಳಿವೆ.