'ಸಾವರ್ಕರ್ ದೇಶದ್ರೋಹಿ - ಅಂಬೇಡ್ಕರ್ ಯಾಕಲ್ಲ' ತಲೆಬರಹದ ವಿವಾದಕ್ಕೆ ಸ್ಪಷ್ಟನೆ

Published : Aug 13, 2017, 06:05 PM ISTUpdated : Apr 11, 2018, 12:56 PM IST
'ಸಾವರ್ಕರ್ ದೇಶದ್ರೋಹಿ - ಅಂಬೇಡ್ಕರ್ ಯಾಕಲ್ಲ' ತಲೆಬರಹದ ವಿವಾದಕ್ಕೆ ಸ್ಪಷ್ಟನೆ

ಸಾರಾಂಶ

ಸುದ್ದಿಯ ಶೀರ್ಷಿಕೆ ಹಲವು ಓದುಗರಲ್ಲಿ ಗೊಂದಲ ಮೂಡಿಸಿದ್ದು ಗಮನಕ್ಕೆ ಬಂದೊಡನೆ ಸುವರ್ಣನ್ಯೂಸ್, ಇದನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು. ತೇಜಸ್ವಿ ಸೂರ್ಯ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿ ಅಪ್ಲೋಡ್ ಮಾಡಿದ್ದ ವಿಡಿಯೋ ಒಂದನ್ನು ಸುವರ್ಣನ್ಯೂಸ್ ವೆಬ್'ಸೈಟ್ ಅಲ್ಲಿ ಮರುಪ್ರಸಾರ ಮಾಡಲಾಗಿತ್ತು. ಆದರೆ ಇನ್ನೂ ಈ ವಿಷಯದಲ್ಲಿ ಹಲವು ಕಡೆ ತಪ್ಪು ಪ್ರಚಾರವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಈಗ ಮತ್ತೆ ಸ್ಪಷ್ಟೀಕರಣ ನೀಡುತ್ತಿದ್ದೇವೆ.

ದಿನಾಂಕ 9 ಆಗಸ್ಟ್ 2017ರ ರಾತ್ರಿ ಎಂಟು ಗಂಟೆಗೆ ಸುವರ್ಣನ್ಯೂಸ್ ಸುದ್ದಿ ವಾಹಿನಿಯಲ್ಲಿ ನಡೆದ "ಯಾರು ಕೊಡಿಸಿದ್ದು ಸ್ವಾತಂತ್ರ್ಯ?" ಚರ್ಚೆಯಲ್ಲಿ ತೇಜಸ್ವಿ ಸೂರ್ಯ, ರಾಧಾಕೃಷ್ಣ ಹೊಳ್ಳ, ಜಿಎನ್ ನಾಗರಾಜ್, ಶಫೀವುಲ್ಲಾ ಹಾಗೂ ವಿಎಸ್ ಉಗ್ರಪ್ಪ ಪಾಲ್ಗೊಂಡಿದ್ದರು.

ಚರ್ಚೆಯ ನಡುವೆ "ಸಾವರ್ಕರರು ಭಾರತೀಯರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸಿದ್ದರು. ಸಾವರ್ಕರಂತಹ ದೇಶದ್ರೋಹಿಯ ವಿಚಾರಕ್ಕೆ ಸೇರಿದವರು ಇಂದು ದೇಶಭಕ್ತಿಯ ಪಾಠ ಹೇಳುತ್ತಿದ್ದಾರೆ" ಎಂಬ ಮಾತು ಬಂದಾಗ, ಆ ಮಾತಿಗೆ ಪ್ರತಿಕ್ರಿಯೆ ನೀಡುತ್ತಿದ್ದ ತೇಜಸ್ವಿ ಸೂರ್ಯ "ಭಾರತೀಯರಿಗೆ ಬ್ರಿಟಿಷ್ ಸೈನ್ಯವನ್ನು ಸೇರಲು ಸಾವರ್ಕರರೊಬ್ಬರೇ ಹೇಳಿದ್ದಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಮಾಹರ್ ಸಮುದಾಯದ ಯುವಕರು ಬ್ರಿಟಿಷ್ ಸೇನೆ ಸೇರಬೇಕೆಂದು ಪ್ರತಿಪಾದಿಸಿದ್ದರು. ಆದರೆ ಅವರನ್ನೂ ಹಾಗೆ ದೇಶದ್ರೋಹಿ ಎಂದು ಹೇಳಲು ಸಾಧ್ಯವೆ? ಓರ್ವ ವ್ಯಕ್ತಿ ಕೊಟ್ಟ ಯಾವುದೋ ಒಂದು ಹೇಳಿಕೆಯನ್ನಷ್ಟೇ ನೋಡುವುದು ಸರಿಯಲ್ಲ. ಅಂಬೇಡ್ಕರ್ ಆಗಲೀ ಸಾವರ್ಕರರಾಗಲಿ ದೇಶದ ಹಿತ ಬಯಸುವವರೇ ಆಗಿದ್ದರು ಹೊರತು ದೇಶದ ವೈರಿಗಳಾದ ಬ್ರಿಟಿಷರ ಜೊತೆ ನಿಲ್ಲುವರರಾಗಿರಲಿಲ್ಲ ಎಂಬುದನ್ನು ಅವರ ಜೀವನವನ್ನು ನೋಡಿದಾಗ ಸ್ಪಷ್ಟವಾಗುತ್ತದೆ" ಎಂಬ ವಿವರಣೆ ಕೊಟ್ಟರು. ನಂತರ ತೇಜಸ್ವಿಯವರ ಮಾತಿಗೆ ಪ್ರತಿಕ್ರಿಯಿಸಿದ ಉಗ್ರಪ್ಪನವರು, 'ಮಹಾತ್ಮ ಗಾಂಧಿಯವರೂ ಮಹಾಯುದ್ಧದ ಸಂಧರ್ಭದಲ್ಲಿ ಬ್ರಿಟಿಷ್ ಸೈನ್ಯವನ್ನು ಸೇರಲು ಭಾರತೀಯರಿಗೆ ಕರೆ ನೀಡಿದ್ದರು. ಯಾರು ಯಾವ ಮಾತನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೆಂಬುದನ್ನು ನೋಡಬೇಕು' ಎಂದರು. ಈ ಚರ್ಚೆ ವೀಕ್ಷಿಸಿದ್ದ ಹಲವರು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಷಯಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಆದರೆ, ಅದರ ಮರುದಿನ ಸುವರ್ಣನ್ಯೂಸ್ ವೆಬ್'ಸೈಟ್'ನಲ್ಲಿ ಆ ಚರ್ಚೆಯ ಮುಖ್ಯಾಂಶಗಳನ್ನು ಪ್ರಕಟಿಸುವ ಸಂದರ್ಭದಲ್ಲಿ "ಸಾವರ್ಕರ್ ದೇಶವಿರೋಧಿಯಾದರೆ ಅಂಬೇಡ್ಕರ್ ಯಾಕಲ್ಲ? ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಪ್ರಶ್ನೆ" ಎಂಬ ತಲೆಬರಹವನ್ನು ಕೊಡಲಾಗಿತ್ತು. ಈ ತಲೆಬರಹ ತಪ್ಪು ಅರ್ಥ ಕಲ್ಪಿಸಿ ಗೊಂದಲ ಮೂಡಿಸಿತು ಎಂಬುದು ನಂತರ ನಮಗೆ ತಿಳಿದುಬಂತು. ಸುದ್ದಿಯ ತಲೆಬರಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ ಅವರು "ಈ ಶೀರ್ಷಿಕೆಯು ಡಾ. ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಮತ್ತು ಅವರ ದೇಶಪ್ರೇಮದ ಪ್ರಾಮಾಣಿಕತೆಯನ್ನು ನಾನು ಪ್ರಶ್ನಿಸಿದ್ದೇನೆ ಎಂಬ ಅರ್ಥ ಕೊಡುವಂತಿದೆ. ಆದರೆ ನಾನು ಡಾ. ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದು ಅವರ ಪ್ರೇರಣೆಯಿಂದಲೇ ಕಾನೂನು ಪದವಿ ಪಡೆದು ವಕೀಲಿ ವೃತ್ತಿಯನ್ನು ಆರಿಸಿಕೊಂಡವನು. ಸ್ವಾಮಿ ವಿವೇಕಾನಂದ ಮತ್ತು ಡಾ. ಅಂಬೇಡ್ಕರ್ ಅವರೇ ನನ್ನ ಚಿಂತನೆಗಳಿಗೆ ಸ್ಪೂರ್ತಿ; ಜೀವನಕ್ಕೆ ಆದರ್ಶ. ನಾನು ಅಂಬೇಡ್ಕರ್ ಕುರಿತಂತೆ ಹಲವಾರು ಲೇಖನಗಳನ್ನು ಹಾಗು ಭಾಷಣಗಳನ್ನು ಮಾಡಿದ್ದೇನೆ. ಹಾಗಿರುವಾಗ ನಾನು ಡಾ. ಅಂಬೇಡ್ಕರ್ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸುವುದು ಕನಸಿನಲ್ಲೂ ಯೋಚಿಸಲು ಆಗದ ವಿಚಾರ. ನಿಮ್ಮ ಶೀರ್ಷಿಕೆ ಮುಖ್ಯವಾಗಿ ಡಾ. ಅಂಬೇಡ್ಕರರಿಗೆ ಮತ್ತು ವೈಯಕ್ತಿಕವಾಗಿ ನನಗೆ - ಇಬ್ಬರಿಗೂ ಅವಮಾನ ಮಾಡುವಂತಿದೆ. ಹಾಗಾಗಿ ಇದನ್ನು ಬದಲಿಸಬೇಕು" ಎಂದು ಹೇಳಿದರು.

ಸುದ್ದಿಯ ಶೀರ್ಷಿಕೆ ಹಲವು ಓದುಗರಲ್ಲಿ ಗೊಂದಲ ಮೂಡಿಸಿದ್ದು ಗಮನಕ್ಕೆ ಬಂದೊಡನೆ ಸುವರ್ಣನ್ಯೂಸ್, ಇದನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು. ತೇಜಸ್ವಿ ಸೂರ್ಯ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿ ಅಪ್ಲೋಡ್ ಮಾಡಿದ್ದ ವಿಡಿಯೋ ಒಂದನ್ನು ಸುವರ್ಣನ್ಯೂಸ್ ವೆಬ್'ಸೈಟ್ ಅಲ್ಲಿ ಮರುಪ್ರಸಾರ ಮಾಡಲಾಗಿತ್ತು. ಆದರೆ ಇನ್ನೂ ಈ ವಿಷಯದಲ್ಲಿ ಹಲವು ಕಡೆ ತಪ್ಪು ಪ್ರಚಾರವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಈಗ ಮತ್ತೆ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಡಾ. ಅಂಬೇಡ್ಕರ್ ರವರ ಮೇರು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶ ಸುವರ್ಣನ್ಯೂಸ್ ವಾಹಿನಿಗಾಗಲಿ ಅಥವಾ ತೇಜಸ್ವಿ ಸೂರ್ಯರವರಿಗಾಗಲಿ ಇರಲಿಲ್ಲ. ಯಾರ ವ್ಯಕ್ತಿತ್ವಕ್ಕೂ ಧಕ್ಕೆ ತರುವುದು ನಮ್ಮ ಉದ್ದೇಶ ಆಗಿರಲಿಲ್ಲ, ಆಗಿರುವುದೂ ಇಲ್ಲ. ಹಾಗಿದ್ದಾಗ್ಯೂ ಯಾರ ಭಾವನೆಗಳಿಗೆ ನೋವುಂಟಾಗಿದ್ದರೆ ಅದಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಈ ವಿಚಾರದಲ್ಲಿ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ