ನ್ಯಾ ದೀಪಕ್‌ ಮಿಶ್ರಾ ರಿಮೋಟ್‌ ಕಂಟ್ರೋಲ್‌ ಸಿಜೆ ಆಗಿದ್ದರು!

By Web DeskFirst Published Dec 4, 2018, 9:23 AM IST
Highlights

ನ್ಯಾ ದೀಪಕ್‌ ಮಿಶ್ರಾ ರಿಮೋಟ್‌ ಕಂಟ್ರೋಲ್‌ ಸಿಜೆ ಆಗಿದ್ದರು! ಬಾಹ್ಯ ಮೂಲದ ಪರಿಣಾಮದಡಿ ಕೆಲಸ ಮಾಡುತ್ತಿದ್ದರು | ಮಿಶ್ರಾ ವಿರುದ್ಧ ಬಂಡೆದ್ದಿದ್ದ ನಿವೃತ್ತ ನ್ಯಾ ಜೋಸೆಫ್‌ ಸ್ಫೋಟಕ ಹೇಳಿಕೆ
 

ನವದೆಹಲಿ (ಡಿ. 04):  ಸುಪ್ರೀಂ ಕೋರ್ಟಿನ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಯಾವುದೋ ಬಾಹ್ಯ ಮೂಲವೊಂದರ ಪ್ರಭಾವದಡಿ ಕೆಲಸ ಮಾಡುತ್ತಿದ್ದರು. ಬಾಹ್ಯ ಮೂಲ ಅವರನ್ನು ರಿಮೋಟ್‌ ಕಂಟ್ರೋಲ್‌ನಂತೆ ನಿಯಂತ್ರಿಸುತ್ತಿತ್ತು ಎಂದು ಮಿಶ್ರಾ ವಿರುದ್ಧ ಬಂಡಾಯ ಸಾರಿ, ಐತಿಹಾಸಿಕ ಪತ್ರಿಕಾಗೋಷ್ಠಿ ಕರೆದಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾ ಕುರಿಯನ್‌ ಜೋಸೆಫ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನ.29ರಂದು ನಿವೃತ್ತರಾಗಿರುವ ಜೋಸೆಫ್‌ ಪಿಟಿಐ ಸಂಸ್ಥೆ ಜತೆಗೆ ಮಾತನಾಡಿದ್ದು, ‘ನ್ಯಾ ಮಿಶ್ರಾ ಅವರ ಮೇಲಿದ್ದ ಬಾಹ್ಯ ಪ್ರಭಾವ ನ್ಯಾಯಾಲಯದ ಆಡಳಿತದ ಮೇಲೆ ಪ್ರಭಾವ ಬೀರುತ್ತಿತ್ತು’ ಎಂದು ಹೇಳಿದ್ದಾರೆ.

ಯಾವ ಆಧಾರದಲ್ಲಿ ಈ ಹೇಳಿಕೆ ನೀಡುತ್ತಿದ್ದೀರಿ ಎಂಬ ಪ್ರಶ್ನೆಗೆ, ಅಂತಹ ಒಂದು ಭಾವನೆ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಮೂರ್ತಿಗಳಲ್ಲಿ ಇತ್ತು. ನ್ಯಾಯಾಲಯದ ಇತರೆ ನ್ಯಾಯಮೂರ್ತಿಗಳಲ್ಲೂ ಅದೇ ತೆರನಾದ ಅಭಿಪ್ರಾಯವಿತ್ತು ಎಂದು ಹೇಳಿದ್ದಾರೆ.

ಆ ರೀತಿ ಪ್ರಭಾವ ಬೀರಿದವರು ರಾಜಕೀಯ ಪಕ್ಷದವರೇ ಅಥವಾ ಸರ್ಕಾರದವರೇ ಎಂಬ ಪ್ರಶ್ನೆಗೆ, ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಜೋಸೆಫ್‌ ತಿಳಿಸಿದ್ದಾರೆ. ಅಲ್ಲದೆ, ನಾವು ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಪರಿಣಾಮ ಉಂಟಾಯಿತು. ನ್ಯಾ ಮಿಶ್ರಾ ಅವರ ಮಿಕ್ಕ ಅವಧಿಯಲ್ಲಿ ಬದಲಾವಣೆಗಳು ಆದವು. ಅವು ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವಧಿಯಲ್ಲೂ ಮುಂದುವರಿಯುತ್ತಿವೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟಿನಲ್ಲಿ ಸೂಕ್ಷ್ಮ ಪ್ರಕರಣಗಳ ಹಂಚಿಕೆಯಲ್ಲಿ ಅಧಿಕಾರ ಶ್ರೇಣಿಯನ್ನು ಕುಗ್ಗಿಸುವ ಯತ್ನ ನಡೆಯುತ್ತಿದೆ. ತಾರತಮ್ಯ ನಡೆಯುತ್ತಿದೆ ಎಂದು ಜ.12ರಂದು ನ್ಯಾ ಜೆ. ಚೆಲಮೇಶ್ವರ (ಈಗ ನಿವೃತ್ತರಾಗಿದ್ದಾರೆ), ನ್ಯಾ ರಂಜನ್‌ ಗೊಗೊಯ್‌ (ಹಾಲಿ ಸಿಜೆ), ನ್ಯಾ ಮದನ್‌ ಲೋಕೂರ್‌ ಹಾಗೂ ನ್ಯಾ ಕುರಿಯನ್‌ ಜೋಸೆಫ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಸಂಚಲನ ಸೃಷ್ಟಿಸಿದ್ದರು.

click me!