
ನವದೆಹಲಿ: ಗಡಿಯಲ್ಲಿ ಆಗಿಂದಾಗ್ಗೆ ತಿಕ್ಕಾಟಗಳು ನಡೆಯುತ್ತಿರುವಾಗಲೇ, ಭಾರತದ ರಾಜಧಾನಿ ನವದೆಹಲಿಗೆ ಸಮೀಪ ಎನ್ನಬಹುದಾದ ಟಿಬೆಟ್‌ನಲ್ಲಿ ಮಿಲಿಟರಿ ನೆಲೆಯೊಂದನ್ನು ಚೀನಾ ಸ್ಥಾಪಿಸುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. 72 ದಿನಗಳ ತೀವ್ರ ಉದ್ವಿಗ್ನ ಸ್ಥಿತಿಗೆ ಕಾರಣವಾಗಿದ್ದ ಡೋಕ್ಲಾಂ ವಿಷಯ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ ಚೀನಾ ಸರ್ಕಾರ ಹೊಸ ಮಿಲಿಟರಿ ಯೋಜನೆ ಕೈಗೊಂಡಿರುವುದು ಭಾರತ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಲ್ಹಾಸಾದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ವೃದ್ಧಿಗಾಗಿ ಗೊಂಗ್ಗಾರ್ ವಿಮಾನ ನಿಲ್ದಾಣವನ್ನು ಚೀನಾ ನಿರ್ಮಿಸಿತ್ತು. ಇದೀಗ ಆ ಏರ್‌ಪೋರ್ಟ್ ಅನ್ನು ಸೇನಾ ನೆಲೆಯಾಗಿ ಪರಿವರ್ತನೆ ಮಾಡಿದೆ. ವಿಮಾನಗಳು ಓಡಾಡುವ ಒಂದು ಹಾದಿ ನೇರವಾಗಿ ಬೆಟ್ಟದ ಒಳಗೆ ಕೊರೆದಿರುವ ಬಾಂಬ್ ಸ್ಫೋಟ ನಿರೋಧಕ ಸುರಂಗದೊಳಕ್ಕೆ ಹೋಗುತ್ತದೆ. ಅಲ್ಲಿ 36 ಯುದ್ಧ ವಿಮಾನಗಳನ್ನು ನಿಲ್ಲಿಸುವಷ್ಟುಸ್ಥಳಾವಕಾಶವಿದೆ ಎಂದು ಈ ಬೆಳವಣಿಗೆ ಬಲ್ಲ ಮೂವರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸ್ಥಳ ಭಾರತದ ರಾಜಧಾನಿ ದೆಹಲಿಯಿಂದ ಕೇವಲ 1350 ಕಿ.ಮೀ. ಇರುವ ಕಾರಣ, ಈ ಮಿಲಿಟರಿ ನೆಲೆ ಭಾರತ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಬಂಕರ್ ಏಕೆ?: ಸಂಭವನೀಯ ಯುದ್ಧ ಸಂದರ್ಭದಲ್ಲಿ ಯುದ್ಧ ವಿಮಾನಗಳು ಶತ್ರುಪಡೆಯ ದಾಳಿಗೆ ತುತ್ತಾಗುವ ಸಾಮರ್ಥ್ಯ ಇದ್ದೇ ಇರುತ್ತದೆ. ತಾನು ಶತ್ರು ದೇಶಕ್ಕೆ ಸಮೀಪ ಇದ್ದರೆ ದೇಶವೊಂದಕ್ಕೆ ದಾಳಿ ನಡೆಸುವುದು ಎಷ್ಟುಸುಲಭವೋ, ದಾಳಿಗೆ ತುತ್ತಾಗುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗಿರುತ್ತದೆ. ಹೀಗಾಗಿಯೇ ಇಂಥ ಸಾಧ್ಯತೆಯಿಂದ ಪಾರಾಗುವ ನಿಟ್ಟಿನಲ್ಲಿ ಚೀನಾ ಸರ್ಕಾರ ಬಂಕರ್‌ಗಳನ್ನು ನಿರ್ಮಿಸಿ ಅವುಗಳಲ್ಲಿ ಯುದ್ಧ ವಿಮಾನಗಳನ್ನು ಇಡಲು ನಿರ್ಧರಿಸಿದೆ ಎನ್ನಲಾಗಿದೆ.
ಕಳೆದ ವರ್ಷ ಡೋಕ್ಲಾಂ ಗಡಿಯಲ್ಲಿ ಭಾರತ- ಚೀನಾ ಸೈನಿಕರ ಜಟಾಪಟಿ ನಡೆದು ಯುದ್ಧ ಸದೃಶ ಸನ್ನಿವೇಶ ನಿರ್ಮಾಣವಾಗಿತ್ತು. ಆನಂತರ ಎರಡೂ ದೇಶಗಳ ಸಂಬಂಧ ಸುಧಾರಣೆಯಾಗಿದೆ. ಆದಾಗ್ಯೂ ದೆಹಲಿಗೆ ಸಮೀಪದಲ್ಲಿ ಸೇನಾ ನೆಲೆ ಸ್ಥಾಪಿಸಿ, ಯುದ್ಧ ವಿಮಾನ ನಿಲ್ಲಿಸುವ ಚೀನಾದ ನಡೆ ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ