ಮಾರ್ಚ್ ಒಳಗೆ ಚಂದ್ರಯಾನ-2 ಉಡಾವಣೆ

By Suvarna Web DeskFirst Published Nov 18, 2017, 6:27 PM IST
Highlights

ಚಂದ್ರನ ಮೇಲೆ ವಾಹನ ಇಳಿಸಿ ಮಣ್ಣು ಪರೀಕ್ಷೆಗೆ ಚಿಂತನೆ | ಡಿಸೆಂಬರಲ್ಲಿ 34 ಉಪಗ್ರಹ ಉಡಾವಣೆ | ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್

ಬೆಂಗಳೂರು: ಮುಂದಿನ ಮಾರ್ಚ್‌ನೊಳಗೆ ‘ಚಂದ್ರಯಾನ-2’ ಉಡಾವಣೆ ಮಾಡಲು ಸಿದ್ಧತೆಗಳು ನಡೆಯುತ್ತಿದ್ದು, ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ವಾಹನ ಇಳಿಸಿ ಮಣ್ಣು ಪರೀಕ್ಷಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಏಷ್ಯಾ ಫೆಸಿಫಿಕ್ ಪ್ರಾದೇಶಿಕ ಬಾಹ್ಯಾಕಾಶ ಸಂಸ್ಥೆಗಳ ಮಂಡಳಿ (ಎಪಿಆರ್‌ಎಸ್‌ಎಎಫ್) 24ನೇ ಅಧಿವೇಶನದ ಬಳಿಕ ಮಾತನಾಡಿದ ಅವರು, ಚಂದ್ರಯಾನ-2 ಮೂರು ವಿಭಾಗದಲ್ಲಿನ ಕೆಲಸಗಳು ಉಡಾವಣೆ ಹಂತದಲ್ಲಿವೆ. ಇದಕ್ಕೂ ಮೊದಲೇ ಡಿಸೆಂಬರ್‌ನಲ್ಲಿ ನಮ್ಮದೇ ಉಪಗ್ರಹ ಹಾಗೂ ವಿವಿಧ 34 ಉಪಗ್ರಹಗಳನ್ನು ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಸಮಾವೇಶದಲ್ಲಿ ಭಾರತ ಮತ್ತು ಜಪಾನ್ ಉಭಯ ರಾಷ್ಟ್ರಗಳು ಸೇರಿ ‘ಲೂನಾರ್ ಮೆಷಿನ್’ ಯೋಜನೆ ಅನುಷ್ಠಾನ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದೆ. ಆರು ತಿಂಗಳಿನಲ್ಲಿ ಯೋಜನೆಯ ಪ್ರಾಥಮಿಕ ಹಂತ ಪ್ರಾರಂಭವಾಗುವ ಸಾಧ್ಯತೆಗಳಿವೆ. ಈ ಯೋಜನೆಯಲ್ಲಿ ಹವಾಮಾನ ಬದಲಾವಣೆ ಕುರಿತ ಸಂಶೋಧನೆ ಬಗ್ಗೆ ಉಭಯ ದೇಶಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದರು.

ಸಮಾವೇಶದಲ್ಲಿ ಬಾಹ್ಯಾಕಾಶ ಕ್ಷೇತ್ರ ಬಳಸಿ ಕೊಂಡು ಅಭಿವೃದ್ಧಿ ಹೊಂದುವ ಕುರಿತು ಮತ್ತು ಯುವ ಪೀಳಿಗೆಗೆ, ವಿದ್ಯಾರ್ಥಿ ಸಮುದಾಯಕ್ಕೆ ಸಹಾಯವಾಗುವ ರೀತಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅನುಕೂಲವಾಗುವ ರೀತಿ ಸಣ್ಣ ಉಪಗ್ರಹಗಳು, ನೀರಿನ ರಾಕೆಟ್‌ನಂತಹ ಉಪಕರಣಗಳ ಸಂಶೋಧನಾ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದರು.

ಹತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾರತ, ಜಪಾನ್, ದಕ್ಷಿಣ ಕೊರಿಯಾ, ಮಲೇಷಿಯಾ, ಥೈಲ್ಯಾಂಡ್, ರಷ್ಯಾ, ಇಸ್ರೇಲ್, ಇಂಡೊನೇಷ್ಯಾ, ವಿಯೆಟ್ನಾಂ ಸೇರಿದಂತೆ

40 ದೇಶಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಜಪಾನ್ ಪ್ರತಿನಿಧಿಗಳಾದ ಮಾಜಿ ಒಯಾಮ, ಒಕುಮಾ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

click me!