ಕೇಂದ್ರ ಸಾಹಿತ್ಯ ಅಕಾಡಮಿ ರೇಸಲ್ಲಿ ಕಂಬಾರ

By Suvarna Web DeskFirst Published Jan 15, 2018, 11:19 AM IST
Highlights

ಈ ಹಿಂದೆ ಅಂದರೆ 1983-1988ರವರೆಗೆ ಡಾ.ವಿ.ಕೃ.ಗೋಕಾಕ್ ಅಧ್ಯಕ್ಷರಾಗಿದ್ದರು. ನಂತರ 1993ರಲ್ಲಿ ಡಾ.ಯು.ಆರ್.ಅನಂತಮೂರ್ತಿ ಅಧ್ಯಕ್ಷರಾಗಿದ್ದರು. ನಂತರದ ಅವಧಿಯಲ್ಲಿ ಕನ್ನಡದಿಂದ ಯಾರೂ ಕೂಡಾ ಅಧ್ಯಕ್ಷರಾಗಿರಲಿಲ್ಲ.

ಬೆಂಗಳೂರು(ಜ.15): ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ನಡೆಯಲಿರುವ ಚುನಾವಣೆಯ ಕಣಕ್ಕೆ ಕನ್ನಡದ ಶ್ರೇಷ್ಠ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಇಳಿದಿದ್ದಾರೆ. ಕುತೂಹಲಕರ ಸಂಗತಿಯೆಂದರೆ, ಸಾಹಿತ್ಯ ಲೋಕದ ಈ ಮಹತ್ವದ ಸಂಸ್ಥೆಗೆ ಈ ಬಾರಿ 81 ವರ್ಷದ ಕಂಬಾರ ಅವರು ಸೇರಿದಂತೆ ಮೂರು ಮಂದಿ ಜ್ಞಾನಪೀಠ ಸಾಹಿತಿಗಳು ಸ್ಪರ್ಧೆಗಿಳಿದಿರುವುದು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಕನ್ನಡ ಭಾಷೆಯ ಸಾಹಿತಿಗಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ. ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ನಂತರ ಡಾ. ಚಂದ್ರಶೇಖರ ಕಂಬಾರರು ಅಕಾಡೆಮಿಯ 12ನೇ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿರುವುದು ಗಮನಾರ್ಹವಾಗಿದೆ. ಕವಿ, ನಾಟಕಕಾರ, ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರ, ಮರಾಠಿಯ ಖ್ಯಾತ ಲೇಖಕ ಪ್ರೊ.ಬಾಲಚಂದ್ರ ನೆಮಾಡೆ ಮತ್ತು ಒಡಿಶಾದ ಹಿರಿಯ ಲೇಖಕಿ ಪ್ರತಿಭಾ ರಾಯ್ ಅವರು ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂವರೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಹಿಂದೆ ಅಂದರೆ 1983-1988ರವರೆಗೆ ಡಾ.ವಿ.ಕೃ.ಗೋಕಾಕ್ ಅಧ್ಯಕ್ಷರಾಗಿದ್ದರು. ನಂತರ 1993ರಲ್ಲಿ ಡಾ.ಯು.ಆರ್.ಅನಂತಮೂರ್ತಿ ಅಧ್ಯಕ್ಷರಾಗಿದ್ದರು. ನಂತರದ ಅವಧಿಯಲ್ಲಿ ಕನ್ನಡದಿಂದ ಯಾರೂ ಕೂಡಾ ಅಧ್ಯಕ್ಷರಾಗಿರಲಿಲ್ಲ.

ಚುನಾವಣೆ ಪ್ರಕ್ರಿಯೆ ಹೇಗೆ: ಮುಂಬರುವ ಫೆ.12ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅವಧಿ ಐದು ವರ್ಷಗಳು. ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಜನರಲ್ ಕೌನ್ಸಿಲ್‌'ನ ಸದಸ್ಯರು ತಮಗೆ ಸೂಕ್ತ ಅಭ್ಯರ್ಥಿ ಎನ್ನಿಸಿದವರ ಹೆಸರನ್ನು ಸೂಚಿಸುತ್ತಾರೆ. ಈ ಬಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷೀಯ ಗಾದಿಗೆ ಕಾಶ್ಮೀರಿ ಲೇಖಕ ಪ್ರೊ.ಶಫಿ ಶೇಖ್, ಹಿಂದಿ ಕವಿ ಹಾಗೂ ಸಾಹಿತಿ ಡಾ.ಲೀಲಾಧರ್ ಜಗೂಡಿ, ಗುಜರಾತ್‌'ನ ಜಾನಪದ ತಜ್ಞ ಬಲವಂತ್ ಜಾನಿ, ಕಂಬಾರರು ಸೇರಿದಂತೆ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದ್ದರು. ಅಕಾಡೆಮಿಯ 99 ಜನರಲ್ ಕೌನ್ಸಿಲ್ ಸದಸ್ಯರು ಈ ಆರು ಮಂದಿಯಲ್ಲಿ ಮೂವರನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಅಂತಿಮವಾಗಿ ಗೌಪ್ಯ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಪ್ರಸ್ತುತ ಅಕಾಡೆಮಿ ಅಧ್ಯಕ್ಷರಾಗಿ ವಿಶ್ವನಾಥ್ ಪ್ರಸಾದ್ ತಿವಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರಲ್ ಕೌನ್ಸಿಲ್‌ನ ಸದಸ್ಯರಲ್ಲೇ ಉಪಾಧ್ಯಕ್ಷರ ಆಯ್ಕೆಯೂ ಜರುಗುತ್ತದೆ ಎಂದು ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ತಿಳಿಸಿದರು. ಪ್ರತಿ ರಾಜ್ಯದ ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು, ಸರ್ಕಾರ ಅಕಾಡೆಮಿ ಸದಸ್ಯರ ಸ್ಥಾನಕ್ಕೆ ಹೆಸರನ್ನು ಸೂಚಿಸುತ್ತವೆ.

click me!