ಸುಪ್ರೀಂ ಕೋರ್ಟ್‌ಗೆ ರಫೇಲ್ ಒಪ್ಪಂದ ವಿವರ ಸಲ್ಲಿಸಿದ ಕೇಂದ್ರ!

By Web DeskFirst Published Oct 27, 2018, 3:45 PM IST
Highlights

ರಫೇಲ್ ಒಪ್ಪಂದದ ವಿವರಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಕೇಂದ್ರ ಸರ್ಕಾರ! ಸುಪ್ರೀಂ ಆದೇಶದಂತೆ ಮೊಹರು ಮಾಡಿದ ಲಕೋಟೆಯಲ್ಲಿ ವಿವರ ಸಲ್ಲಿಕೆ! ಒಪ್ಪಂದದ ಮಾಹಿತಿ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಶರ್ಮಾ

ನವದೆಹಲಿ(ಅ.27): ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಸುಪ್ರೀಂಕೋರ್ಟ್ ಗೆ ಇಂದು ಕೇಂದ್ರ ಸರ್ಕಾರ ವರದಿ ಸಲ್ಲಿಸಿದೆ. 

ಭಾರತ ಮತ್ತು ಫ್ರಾನ್ಸ್ ನಡುವಣ ನಡೆದಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಫೇಲ್ ಒಪ್ಪಂದದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ, ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರ್ಕಾರ ಭಾರೀ ಅವ್ಯವಹಾರ ನಡೆಸಿದ್ದು, ಒಪ್ಪಂದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ಎಂ.ಎಲ್.ಶರ್ಮಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿಯನ್ನು ಅ.10 ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ಕೆ.ಎಂ ಜೋಸೆಫ್ ಅವರನ್ನೊಳಗೊಂಡ ಪೀಠ, ಅರ್ಜಿಗಳಲ್ಲಿ ಒಪ್ಪಂದ ಕುರಿತು ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅ. 29 ರ ಒಳಗಾಗಿ ರಫೇಲ್ ಒಪ್ಪಂದ ನಿರ್ಧಾರ ಕೈಗೊಂಡ ಪ್ರಕ್ರಿಯೆ ಕುರಿತು ಮೊಹರು ಮಾಡಿದ ಲಕೋಟೆಯಲ್ಲಿ ವಿವರ ಸಲ್ಲಿಸುವಂತೆ ಸೂಚನೆ ನೀಡಿತ್ತು. 

ಸುಪ್ರೀಂಕೋರ್ಟ್ ಆದೇಶದಂತೆಯೇ ಇದೀಗ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ವರದಿ ಸಲ್ಲಿಸಿದೆ.

click me!