ಮಹದಾಯಿ ಬಳಿಕ ಮೇಕೆದಾಟಿಗೂ ಕೇಂದ್ರ ಕೊಕ್ಕೆ

Published : Jul 22, 2017, 09:15 AM ISTUpdated : Apr 11, 2018, 12:42 PM IST
ಮಹದಾಯಿ ಬಳಿಕ ಮೇಕೆದಾಟಿಗೂ ಕೇಂದ್ರ ಕೊಕ್ಕೆ

ಸಾರಾಂಶ

ಕರ್ನಾಟಕದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಾದ ಬಳಿಕ 2019ರಲ್ಲಿ ಸಂಸತ್ತಿನ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಹಿತವೂ ಮುಖ್ಯ, ಮಾತ್ರವಲ್ಲ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನ ವಿರೋಧವನ್ನೂ ಕಟ್ಟಿಕೊಳ್ಳುವಂತಿಲ್ಲ.

ಬೆಂಗಳೂರು: ಈಗಾಗಲೇ ಮಹದಾಯಿ ನದಿ ನೀರಿನ ವಿವಾದಕ್ಕೆ ಸಿಲುಕಿ ರಾಜ್ಯದ ಮಹತ್ವದ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿರುವಾಗಲೇ ಕರ್ನಾಟಕದ ಮತ್ತೊಂದು ಮಹತ್ವದ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಜೂನ್ 7ರಂದು ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದ ಸಮಗ್ರ ಯೋಜನಾ ವರದಿಗೆ ಇಲಾಖೆಯಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಈ ಕುರಿತ ಕಡತ ರಾಜ್ಯ ಸರ್ಕಾರದ ಕೈ ಸೇರಿದೆ. ಇದೀಗ ರಾಜ್ಯದ ಜಲಸಂಪನ್ಮೂಲ ಇಲಾಖೆಯ ತಜ್ಞರ ತಂಡ ಕೇಂದ್ರದ ಆಕ್ಷೇಪಕ್ಕೆ ಸೂಕ್ತ ಉತ್ತರ ಕೊಡಲು ಸಿದ್ಧತೆ ನಡೆಸಿದೆ.

ಕೇಂದ್ರದ ಆಕ್ಷೇಪಣೆ ಏನು?
ಕಾವೇರಿ ನದಿ ನೀರಿನ ಬಳಕೆ ಕುರಿತಂತೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಶತಮಾನಗಳಿಂದ ವಿವಾದ ಇದೆ. ಈ ಕುರಿತಂತೆ ಕಾವೇರಿ ನದಿ ನೀರಿನ ನ್ಯಾಯಾಧಿಕರಣ ಅಂತಿಮ ತೀರ್ಮಾನ ನೀಡಿದ್ದು, ಆಯಾ ರಾಜ್ಯಗಳ ಪಾಲಿನ ಬಳಕೆಯ ನೀರಿನ ಪ್ರಮಾಣವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಆದರೆ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ನಾಲ್ಕೂ ರಾಜ್ಯಗಳ ಸ್ಪಷ್ಟೀಕರಣ ಕೋರಿ ಮೇಲ್ಮನವಿಗಳನ್ನು ಸಲ್ಲಿಸಿವೆ. ಈ ಮೇಲ್ಮನವಿಗಳ ವಿಚಾರಣೆ ಮುಗಿದು ಆದೇಶ ಹೊರಬೀಳುವ ಹಂತದಲ್ಲಿ ಮತ್ತೊಂದು ಬೃಹತ್ ಯೋಜನೆ ರೂಪಿಸುವುದು ಎಷ್ಟು ಸಾಧು. ಅದೂ ಕೂಡ ಸಹವರ್ತಿ ರಾಜ್ಯಗಳ ಜತೆ ಸಮಾಲೋಚಿಸದೇ, ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗೂ ಸಹಮತ ಪಡೆಯದೇ ಈ ಯೋಜನೆ ಅನುಷ್ಠಾನ ಎಷ್ಟು ಸರಿ? ಎಂಬುದು ಕೇಂದ್ರದ ಪ್ರಮುಖ ಆಕ್ಷೇಪಣೆ ಎಂದು ಉನ್ನತ ಮೂಲಗಳು ಹೇಳಿವೆ.

ಹೀಗೆ ತರಾತುರಿಯಲ್ಲಿ ಯೋಜನೆ ಅನುಷ್ಠಾನಗೊಳಿಸುವುದರಿಂದ ಕಾನೂನು ತೊಡಕು ಎದುರಾಗಬಹುದು ಹಾಗೂ ಸಹವರ್ತಿ ರಾಜ್ಯಗಳಿಗೆ ಯೋಜನೆಯಿಂದ ಆಗುವ ಸಾಧಕ-ಬಾಧಕಗಳನ್ನು ಪರಿಗಣಿಸಬೇಕಾಗುತ್ತದೆ. ಈಗಾಗಲೇ ಮಳೆ ಕೊರತೆ ಕಾರಣದಿಂದ ಪ್ರತಿವರ್ಷ ಕಾವೇರಿ ಕಣಿವೆ ರಾಜ್ಯಗಳಿಗೆ ಅಗತ್ಯ ನೀರಿನ ಹರಿವಿನ ಕೊರತೆ ಎದುರಾಗಿದೆ. ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಆಯಾ ಹಂಗಾಮಿನಲ್ಲಿ ಕಣಿವೆಯ ಕೆಳಹಂತದ ರಾಜ್ಯಗಳಿಗೆ ನೀರು ಬಿಡುಗಡೆ ಮಾಡುವಲ್ಲೂ ಸಾಕಷ್ಟು ತೊಂದರೆ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಹೊಸ ಯೋಜನೆ ಕೈಗೊಳ್ಳುವುದು ಎಷ್ಟು ಸೂಕ್ತವಾದೀತು ಎಂದೂ ಕೇಂದ್ರ ಜಲಸಂಪನ್ಮೂಲ ಇಲಾಖೆ ಅಭಿಪ್ರಾಯಪಟ್ಟಿದೆ.

ಮೇಕೆದಾಟು ಯೋಜನೆ ಹಿನ್ನೆಲೆ ಏನು?
ಒಟ್ಟು 66.50 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ನಿರ್ಮಾಣಕ್ಕಾಗಿ 5,912 ಕೋಟಿ ರು.ಗಳ ಅಂದಾಜು ವೆಚ್ಚದ ಯೋಜನೆ ಇದಾಗಿದೆ. ಕಾವೇರಿ ನೀರಾವರಿ ನಿಗಮದ (ಸಿಎನ್‌ಎನ್‌ಎಲ್) ವ್ಯಾಪ್ತಿಗೆ ಒಳಪಡುವ ಮತ್ತು ಸಿಎನ್‌ಎನ್‌ಎಲ್‌ನಿಂದಲೇ ಅನುಷ್ಠಾನಗೊಳ್ಳಲಿರುವ ಈ ಯೋಜನೆ ಮೂಲಕ ಬೆಂಗಳೂರು ಸೇರಿದಂತೆ ನೂರಾರು ಪಟ್ಟಣ-ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ.

ಮೇಕೆದಾಟು ಅಣೆಕಟ್ಟೆಯು 99 ಮೀಟರ್ ಎತ್ತರ ಹಾಗೂ 660 ಮೀಟರ್ ಉದ್ದದ ಅಳತೆ ಹೊಂದಲಿದೆ. ಇದಕ್ಕಾಗಿ 4,716 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 280 ಹೆಕ್ಟೇರ್ ಕಂದಾಯ ಭೂಮಿ ಸೇರಿದಂತೆ ಒಟ್ಟು 4,995.9 ಹೆಕ್ಟೇರ್ ಪ್ರದೇಶವನ್ನು ಬಳಕೆ ಮಾಡಲಾಗುತ್ತಿದೆ. ಫೆಬ್ರವರಿ 16ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಅನುಮೋದನೆ ನೀಡಲಾಗಿತ್ತು. ಕೇಂದ್ರ ಜಲಸಂಪನ್ಮೂಲ ಇಲಾಖೆ ಹಾಗೂ ಕೇಂದ್ರ ಜಲ ಆಯೋಗದ ಅನುಮೋದನೆಗಾಗಿ ಜೂನ್ 7ರಂದು ಡಿಪಿಆರ್ ಸಲ್ಲಿಸಲಾಗಿತ್ತು.

ಕಾವೇರಿ ನದಿ ನೀರಿನ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ರಾಜ್ಯದ ಪಾಲಿನ 190 ಟಿಎಂಸಿ ನೀರಿನ ಬಳಕೆಯ ಮಿತಿಗೆ ಒಳಪಟ್ಟು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿರುವ ಮೇಕೆದಾಟು ಯೋಜನೆಯಿಂದ ನ್ಯಾಯಾಧಿಕರಣದ ಆದೇಶ ಉಲ್ಲಂಘನೆಯಾಗುವ ಪ್ರಶ್ನೆಯೇ ಇಲ್ಲ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ. ಇದೇ ಅಂಶವನ್ನು ಡಿಪಿಆರ್ ಸಹಿತ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಪರ ಸಿಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದರು.

ತಮಿಳುನಾಡಿನ ಕ್ಯಾತೆ:
ತಮಿಳುನಾಡಿನ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಈಗಾಗಲೇ ಮೇಕೆದಾಟು ಯೋಜನೆಗೆ ಬಹಿರಂಗ ಅಪಸ್ವರ ತೆಗೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಮೇಕೆದಾಟು ಯೋಜನೆ ಸ್ಥಗಿತಗೊಳಿಸುವಂತೆ ಮನವಿಯನ್ನೂ ಮಾಡಿದ್ದರು. ಕಾವೇರಿ ಕಣಿವೆಯನ್ನು ಆಶ್ರಯಿಸಿರುವ ತಮಿಳುನಾಡೂ ಸೇರಿದಂತೆ ಉಳಿದ ಮೂರು ರಾಜ್ಯಗಳ ಅಭಿಪ್ರಾಯ ಮತ್ತು ಸಹಮತ ಪಡೆಯದೇ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ರೂಪಿಸಿದೆ ಹಾಗೂ ಈ ಯೋಜನೆ ಕಾವೇರಿ ನ್ಯಾಯಾಧಿಕರಣದ ಆದೇಶದ ಉಲ್ಲಂಘನೆಯಾಗಿದೆ ಎಂಬುದು ತಮಿಳುನಾಡಿನ ಪ್ರಮುಖ ಆಕ್ಷೇಪವಾಗಿದೆ.

ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿ ಮೋದಿ ಸರ್ಕಾರ:
ಕರ್ನಾಟಕದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಾದ ಬಳಿಕ 2019ರಲ್ಲಿ ಸಂಸತ್ತಿನ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಹಿತವೂ ಮುಖ್ಯ, ಮಾತ್ರವಲ್ಲ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನ ವಿರೋಧವನ್ನೂ ಕಟ್ಟಿಕೊಳ್ಳುವಂತಿಲ್ಲ. ಏಕೆಂದರೆ ತಮಿಳುನಾಡು ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಕ್ಷೇತ್ರ ಹೊಂದಿದ ಐದನೇ ದೊಡ್ಡ ರಾಜ್ಯವಾಗಿದೆ. ಹೀಗಾಗಿ ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕ ಸಲ್ಲಿಸಿರುವ ಡಿಪಿಆರ್ ಅನ್ನು ನೇರವಾಗಿ ತಿರಸ್ಕರಿಸದೇ ವಿಳಂಬ ತಂತ್ರ ಅನುಸರಿಸುವ ನಿಟ್ಟಿನಲ್ಲಿ ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿ, ಕಡತವನ್ನು ರಾಜ್ಯಕ್ಕೆ ರವಾನಿಸಿದೆ ಎಂದು ಕೇಂದ್ರದ ಈ ನಡೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.

‘‘ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ ಮೇಕೆದಾಟು ಯೋಜನೆ ಕುರಿತ ಡಿಪಿಆರ್‌ಗೆ ಕೆಲ ಆಕ್ಷೇಪಗಳು ವ್ಯಕ್ತವಾಗಿವೆ. ಈ ಕುರಿತು ಹಲವು ಸ್ಪಷ್ಟೀಕರಣಗಳನ್ನು ಕೇಳಿ ಸಿಎನ್‌ಎನ್‌ಎಲ್‌ಗೆ ಪತ್ರ ಬಂದಿದೆ. ಈ ಕುರಿತು ಅಧ್ಯಯನ ಮಾಡಿದ ಬಳಿಕ ಸೂಕ್ತ ಉತ್ತರ ನೀಡಲಾಗುವುದು’’
- ಬಿ.ಶಿವಶಂಕರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

ವರದಿ: ಶಿವಕುಮಾರ್ ಮೆಣಸಿನಕಾಯಿ, ಕನ್ನಡಪ್ರಭ
epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು