
ನವದೆಹಲಿ(ಅ.18): ಸುಪ್ರೀಂಕೋರ್ಟ್ ಆದೇಶದ ಬಳಿಕ ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಕೊಳ್ಳದಲ್ಲಿ ಅಧ್ಯಯನ ನಡೆಸಿದ ಕೇಂದ್ರ ತಂಡ ನಿನ್ನೆಯೇ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದೆ. ತಾಂತ್ರಿಕ ತಂಡದ ಅಧ್ಯಕ್ಷ ಜಿ ಎಸ್ ಝಾ ಅಧ್ಯಕ್ಷತೆಯ ತಂಡವು ಸಲ್ಲಿಸಿರೋ ೩೯ ಪುಟಗಳ ವರದಿಯಲ್ಲಿ ರಾಜ್ಯದ ಕಾವೇರಿ ಸಂಕಷ್ಟವನ್ನ ವಿವರಿಸಿದೆ. ಕರ್ನಾಟಕದ KRS, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿನ ಸ್ಥಿತಿಗತಿ ಮತ್ತು ತಮಿಳುನಾಡಿನ ಮೆಟ್ಟೂರು ಜಲಾಶಯದ ವಸ್ತು ಸ್ಥಿತಿಯನ್ನ ದಾಖಲಿಸಿದೆ.
ಜೂನ್ ಒಂದರಿಂದ ಅಕ್ಟೋಬರ್ ೧೩ ರ ವರೆಗಿನ ನೀರಿನ ಒಳ ಮತ್ತು ಹೊರಹರಿವು ಹಾಗೂ ಅಕ್ಟೋಬರ್ ೧೪ ರಿಂದ ಮೇ ೩೧ ೨೦೧೭ ರವರೆಗಿನ ನೀರು ಎಷ್ಟು ಬರಬಹುದು ಅಂತ ಅಂದಾಜು ಮಾಡಲಾಗಿದೆ .
ಅಕ್ಟೋಬರ್ ೧೩ರ ಪ್ರಕಾರ ಕರ್ನಾಟಕದ ಜಲಾಶಯಗಳಲ್ಲಿ ಬಳಕೆಗೆ ಲಭ್ಯ ಅಂದ್ರೆ ಲೈವ್ ಸ್ಟೋರೇಜ್ ಇರುವ ನೀರು ೨೨. ೯೦ ಟಿ ಎಂ ಸಿ ಅಂತ ಅಧ್ಯಯನ ತಂಡ ಹೇಳಿದೆ. ಕರ್ನಾಟಕದಲ್ಲಿ ನೀರಿಲ್ಲದೆ ೧. ೮೮ ಲಕ್ಷ್ಯ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಹೀಗಾಗಿ ಉಳಿದಿರುವ ೪. ೨೭ ಲಕ್ಷ್ಯ ಎಕರೆ ಪ್ರದೇಶಕ್ಕೆ ನೀರು ಕೊಡಬೇಕಾಗುತ್ತದೆ. ಶೇಕಡಾ ೫೦ ಪ್ರತಿಶತಃ ಅವಲಂಬನೆ ಅನ್ವಯ ಲೆಕ್ಕ ಹಾಕಿದರೂ ಕರ್ನಾಟಕದ ಜಲಾಶಯಗಳಿಗೆ ೫೬. ೩೯ ಟಿ ಎಂ ಸಿ ನೀರು ಬರಬೇಕು ಅಂತಲೂ ಕೇಂದ್ರದ ತಂಡ ಅಂದಾಜಿದೆ. ಅಲ್ಲದೆ, ಕೇಂದ್ರ ತಂಡ ಈಗಿರುವ ನೀರಿನ ಪ್ರಮಾಣವನ್ನ ಲೈವ್ ಮತ್ತು ಡೆಡ್ ಸ್ಟೋರೇಜ್ ಸೇರಿಸಿದಲ್ಲಿ ಒಟ್ಟು ೮೯. ೧೬ ಟಿ ಎಂ ಸಿ ನೀರು ಸಿಗಲಿದೆ. ಆದರೆ ಕೇಂದ್ರ ತಂಡ ಕರ್ನಾಟಕದ ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಮುಂದಿನ ಮೇ ೩೧ ೨೦೧೭ ರ ವರೆಗೆ ಬೇಕಾಗಿರುವ ನೀರಿನ ಪ್ರಮಾಣ ೬೫. ೪೮ ಟಿ ಎಂ ಸಿ ಅಂತ ಹಿಂದಿನ ೨೯ ವರ್ಷಗಳ ಅಂದಾಜಿನ ಮೇಲೆ ಲೆಕ್ಕ ಹಾಕಿದೆ
ತಮಿಳುನಾಡಿನ ಜಲಾಶಯಗಳ ಸ್ಥಿತಿ: ತಮಿಳುನಾಡಿನ ೧೨ ಲಕ್ಷ್ಯ ಎಕರೆ ಸಾಂಬಾ ಬೆಳೆಗೆ ಕಳೆದ ೨೯ ವರ್ಷಗಳ ಅಂದಾಜು ಗಮನಿಸಿದರೆ ೧೬೦ ಟಿ ಎಂ ಸಿ ನೀರು ಬೇಕಾಗಬಹುದು. ಪುದುಚೇರಿಗೆ TMC ನೀರು ಸೇರಿಸಿದರೆ ತಮಿಳುನಾಡಿಗೆ ೧೬೩ ಟಿ ಎಂ ಸಿ ನೀರು ಬೇಕಾಗುತ್ತದೆ. ಆದ್ರೆ, ೧೨ ಲಕ್ಷ ಎಕರೆಯಲ್ಲಿ ಈಗಾಗಲೇ ಬಿತ್ತನೆಯಾಗಿರುವ ೪. ೪೬ ಲಕ್ಷ ಎಕರೆ ಮತ್ತು ಭತ್ತದ ನರ್ಸರಿಗಳಿರುವ ೨. ೦೪ ಲಕ್ಷ ಎಕರೆ ಪ್ರದೇಶ ಇದೆ ಅಂತಲೂ ಕೇಂದ್ರದ ತಂಡ ಸ್ಪಷ್ಟವಾಗಿ ಹೆಳಿದೆ. ಅಲ್ಲದೆ, ತಮಿಳುನಾಡಿಗೆ ೨೦೧೭ ರ ಏಪ್ರಿಲ್ ತನಕ ಸಿಗಬಹುದು ಅಂತ ಅಂದಾಜಿಸಿ ೧೦೧. ೭೨ ಟಿ ಎಂ ಸಿ ಜೊತೆಗೆ ಈಗಿರುವ ನೀರಿನ ಪ್ರಮಾಣವನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಅಂದ್ರೆ ಲೈವ್ ಮತ್ತು ಡೆಡ್ ಸ್ಟೋರೇಜ್ ಲೆಕ್ಕ ಹಾಕಿದರೆ ೧೪೩. ೧೮ ಟಿ ಎಂ ಸಿ ಅಂತ ಕೇಂದ್ರೀಯ ಅಧ್ಯಯನ ತಂಡ ಹೇಳಿದೆ
ಇನ್ನೂ, ಖುಷಿಯ ವಿಚಾರವೆಂದರೆ ಎಲ್ಲಿಯೂ ಕರ್ನಾಟಕದಿಂದ ತಮಿಳುನಾಡಿಗೆ ಈ ಕ್ಷಣಕ್ಕೆ ಎಷ್ಟು ನೀರು ಬಿಡಬೇಕಾಗಬಹುದು ಅಂತ ಹೇಳುವ ಗೊಡವೆಗೆ ಹೋಗಿಲ್ಲ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಮುಂದಿನ ೮ ತಿಂಗಳಲ್ಲಿ ಕೃಷಿಗೆ ಮತ್ತು ಕುಡಿಯುವ ನೀರಿಗೆ ಎಷ್ಟು ನೀರು ಬೇಕಾಗಬಹುದು ಮಳೆಯಿಂದ ಎಷ್ಟು ಸಿಗಬಹುದು ಅನ್ನೋದನ್ನ ಮಾತ್ರ ಸೂಚ್ಯವಾಗಿ ತಿಳಿಸಿದೆ. ಇನ್ನು ನೀರಿನ ಕೊರತೆಯಿಂದಾಗಿ ಮಂಡ್ಯದಲ್ಲಿ ರೈತರು ಸರಣಿ ಆತ್ಮಹತ್ಯೆಗಳನ್ನು ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರವೇ ಕರ್ನಾಟಕದ ಕಾವೇರಿ ಕೊಳ್ಳದ ೪೮ ತಾಲೂಕುಗಳ ಪೈಕಿ ೪೨ ತಾಲೂಕುಗಳು ಬರಪೀಡಿತವಾಗಿವೆ ಅಂತಲೂ ವರದೀಲಿ ಹೇಳಿದೆ. ಒಟ್ನಲ್ಲಿ ಕೇಂದ್ರದ ಸರ್ಕಾರದ ಈ ವರದಿ ನಾಳಿನ ವಿಚಾರಣೆಗೆ ರಾಜ್ಯಕ್ಕೆ ವರವಾಗಲಿದೆ ಅಂತ ಹೇಳಲಾಗ್ತಿದೆ.
ಪ್ರಶಾಂತ್ ನಾತು, ಸುವರ್ಣ ನ್ಯೂಸ್, ನವದೆಹಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.