ಹೀಗೂ ಉಂಟೆ..? ರಾತ್ರೋರಾತ್ರಿ ಬಂದು, ಹೆಡ್'ಲೈಟ್ ಬೆಳಕಲ್ಲಿ ಬರ ಸಮೀಕ್ಷೆ ನಡೆಸಿದ ಕೇಂದ್ರದ ತಂಡ

By Suvarna Web DeskFirst Published Nov 4, 2016, 3:37 AM IST
Highlights

ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ಕೇವಲ ಎರಡು ನಿಮಿಷವಷ್ಟೇ ಬರ ಅಧ್ಯಯನ ನಡೆಸಿ ಮುಂದೆ ಸಾಗಿದರು.

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಂದಿ​ರುವ ಕೇಂದ್ರ ತಂಡ ಮೊದಲ ದಿನವಾದ ಗುರು​ವಾರ ಮೂರು ತಂಡಗಳಲ್ಲಿ ಚಿಕ್ಕ​ಬಳ್ಳಾ​​ಪುರ, ತುಮ​ಕೂರು, ರಾಮ​ನಗರ, ಚಾಮ​ರಾಜನಗರ ಹಾಗೂ ಚಿತ್ರದುರ್ಗ​ದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿತು. 

ಚಿಕ್ಕಬಳ್ಳಾಪುರ ಜಿಲ್ಲೆಗೆ ಮಧ್ಯಾಹ್ನ 3 ಗಂಟೆಗೆ ಬರಬೇಕಿದ್ದ ಇಂಧನ ಇಲಾಖೆಯ ಕಮಲ್‌ ಚೌಹಾಣ್‌, ನೀತಿ ಆಯೋಗದ ಸಂಶೋಧನಾಧಿಕಾರಿ ಗಣೇಶರಾಮ್‌ ಹಾಗೂ ಭಾರತೀಯ ಆಹಾರ ನಿಗಮದ ಎಲ್‌. ಚಾತ್ರೂನಾಯ್ಕ ನೇತೃತ್ವದ ಕೇಂದ್ರ ತಂಡದ ಅಧಿಕಾರಿಗಳು ಸಂಜೆ 5.30ಕ್ಕೆ ಆಗಮಿಸಿದರು.  ನಂತರ ಆದಿಗಾನಹಳ್ಳಿಯಲ್ಲಿ 10 ನಿಮಿಷ ಮಾಹಿತಿ ಪಡೆದರೇ ಹೊರತು ಬೆಳೆ ಹಾನಿ ಯಾದ ಪ್ರದೇಶ ವೀಕ್ಷಿಸಲಿಲ್ಲ. 

ನಂತರ ಗುಂಡ್ಲಪಲ್ಲಿಗೆ ಬರುವಷ್ಟರಲ್ಲಿ ಕತ್ತಲು ಆವರಿಸಿದ್ದರಿಂದ ಯಲ್ಲಂಪಲ್ಲಿ ಕೆರೆ ಏರಿ ಮೇಲೆ ನಿಂತು ಕಾರುಗಳ ಹೆಡ್‌'ಲೈಟ್‌ ಬೆಳಕಿನಲ್ಲಿ ಒಣಗಿದ ಕೆರೆ ಹಾಗೂ ಬಾಡಿರುವ ಜೋಳದ ಬೆಳೆಯನ್ನು ಎರಡನೇ ನಿಮಿಷದಲ್ಲಿ ವೀಕ್ಷಿಸಿ ನಿರ್ಗಮಿಸಿದರು. ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ಕೇವಲ ಎರಡು ನಿಮಿಷವಷ್ಟೇ ಬರ ಅಧ್ಯಯನ ನಡೆಸಿ ಮುಂದೆ ಸಾಗಿದರು.

ವಿದರ್ಭ ಮಾದರಿ ಪ್ಯಾಕೇಜ್‌ ನೀಡಿ:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕುಗಳಲ್ಲಿ ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಕೇಂದ್ರ ತಂಡದ ಮುಖ್ಯಸ್ಥೆ ನೀರಜಾ ಅದಿದಾಮ್‌, ಪಶು ಸಂಗೋಪನಾ ಇಲಾಖೆ ಸಹಾಯಕ ಆಯುಕ್ತ ಡಾ.ಅಶೋಕ ಗುಪ್ತ, ಹಣಕಾಸು ಜಂಟಿ ನಿರ್ದೇಶಕ ಎಸ್‌.ಸಿ. ಮೀನಾ, ಕುಡಿಯುವ ನೀರಿನ ಕನ್ಸಲ್ಟೆಂಟ್‌ ಜಿ.ಆರ್‌. ಜಾರಗರ್‌ ಬರ ಅಧ್ಯಯನ ನಡೆಸಿದರು. ತಂಡದ ಜತೆಗಿದ್ದ ಸಚಿವ ಆಂಜನೇಯ ಜಿಲ್ಲೆಗೆ ವಿದರ್ಭ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದರು.

ಗಡಿ ಜಿಲ್ಲೆಗೆ ಭೇಟಿ: ಈ ನಡುವೆ, ರಾಮನಗರದಲ್ಲಿ ಬರವೀಕ್ಷಣೆ ನಡೆಸಿದ ಬಳಿಕ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ ತಂಡ ಮಳೆಯ ಕೊರೆತೆಯಿಂದ ಒಣಗಿ ನಿಂತಿರುವ ಬೆಳೆ ವೀಕ್ಷಿಸಿದರು. ನಂತರ ಕೊಳ್ಳೇಗಾಲ ತಾಲೂಕಿನ ಕೆಲ ಪ್ರದೇಶದಲ್ಲಿ ಒಣಗಿ ನಿಂತಿರುವ ಬತ್ತದ ಗದ್ದೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. 

(ಕನ್ನಡಪ್ರಭ ವಾರ್ತೆ)

click me!