ವಿಶ್ವಾಸ ಮತ ಯಾಚನೆಯಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಲನುಭವಿಸಿ ಬಿಜೆಪಿ ಸರ್ಕಾರ ರಚನೆ ಸಾಧ್ಯತೆ ನಿಚ್ಚಳವಾದ ಹಿನ್ನಲೆಯಲ್ಲಿ ಬಿ. ಎಸ್. ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.
ಶಿವಮೊಗ್ಗ(ಜು.24): ವಿಶ್ವಾಸ ಮತ ಯಾಚನೆಯಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಲನುಭವಿಸಿ ಬಿಜೆಪಿ ಸರ್ಕಾರ ರಚನೆ ಸಾಧ್ಯತೆ ನಿಚ್ಚಳವಾದ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಪೊಲಿಟಿಕಲ್ ಹೈಡ್ರಾಮಾದಿಂದ ಬೇಸತ್ತಿದ್ದ ಜನ:
ಕಳೆದ ಕೆಲ ದಿನದಿಂದ ಕಲಾಪವನ್ನು ನೇರವಾಗಿ ವೀಕ್ಷಿಸಿ ಇಂದು ನಾಳೆ ಸರ್ಕಾರದ ಪತನ ಖಚಿತ, ಕ್ಷೇತ್ರದ ಶಾಸಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಜನ ಜನ ಮಹಾತ್ವಾಕಾಂಕ್ಷೆಯಲ್ಲಿದ್ದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ, ಸಚಿವರ ನಿತ್ಯ ಕಲಾಪ ಮಂದೂಡುವ ವರ್ತನೆಯಿಂದ ಜನತೆ ತೀವ್ರ ಬೇಸತ್ತಿದ್ದರು.
ಟಿವಿ ಮುಂದಿನಿಂದ ಕದಲದ ಜನ:
ಅಂತಿಮವಾಗಿ ಮಂಗಳವಾರ ಸಂಜೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಶ್ಚಿತವಾಗುತ್ತಿದ್ದಂತೆಯೇ ಸಂಭ್ರಮ ಪಟ್ಟರು. ವಿಶ್ವಾಸ ಮತ ಯಾಚನೆ ಕ್ಷಣವನ್ನು ನೋಡಲು ಇಲ್ಲಿನ ಜನತೆ ತುದಿಗಾಲಲ್ಲಿ ನಿಂತಿದ್ದರು. ಜನರೆಲ್ಲ ಟಿವಿ ಮುಂದೆ ಕುಳಿತ ಕಾರಣ ಪಟ್ಟಣದ ಹಲವು ರಸ್ತೆಯಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುವಂತಾಗಿತ್ತು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಗಿಲು ಮುಟ್ಟಿದ ಸಂಭ್ರಮ:
ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು ಕಲಾಪವನ್ನು ತದೇಕಚಿತ್ತದಿಂದ ವೀಕ್ಷಿಸಿದರು. ಅಂತಿಮವಾಗಿ ವಿಶ್ವಾಸ ಮತ 6 ಮತಗಳ ಸೋಲನುಭವಿಸಿದ ನಂತರದಲ್ಲಿ ಕಚೇರಿಯಲ್ಲಿದ್ದ ಕಾರ್ಯಕರ್ತರು, ಮುಖಂಡರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಸರ್ಕಾರ ರಚನೆಯಿಂದ ವಂಚಿತವಾಗಿದ್ದ ಯಡಿಯೂರಪ್ಪನವರಿಗೆ 16 ತಿಂಗಳ ನಂತರದಲ್ಲಿ ಪುನಃ ಮುಖ್ಯಮಂತ್ರಿಯಾಗುವ ಸುಯೋಗ ಒದಗಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸರ್ಕಾರ ಪತನದ ಜೊತೆಗೆ ಕೈ - ದಳ ಮೈತ್ರಿಯೂ ಅಂತ್ಯ
ಸಿಹಿ ಹಂಚಿದ ಕಾರ್ಯಕರ್ತರು:
ಕಚೇರಿಯಲ್ಲಿ ಪರಸ್ಪರ ಸಿಹಿ ವಿತರಿಸಿ ಸಂಭ್ರಮಿಸಿ ನಂತರ ಪಟ್ಟಣದ ವಿವಿಧ ವೃತ್ತ, ಪ್ರಮುಖ ಬೀದಿಯಲ್ಲಿ ಪಟಾಕಿಸಿಡಿಸಿ ಹಬ್ಬದ ರೀತಿ ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರ.ಕಾ ಹಾಗೂ ಯಡಿಯೂರಪ್ಪನವರ ಆಪ್ತ ಗುರುಮೂರ್ತಿ ಮಾತನಾಡಿ, ರಾಜ್ಯದಲ್ಲಿ ಪುನಃ ಅಭಿವೃದ್ಧಿ ಪರ್ವ ಆರಂಭವಾಗಲಿದ್ದು ತಾಲೂಕಿನ ರೈತರ ಬಹು ದಿನದ ಶಾಶ್ವತ ನೀರಾವರಿ ಕನಸು ಸಹಿತ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಮುಖಂಡ ಸಿದ್ದನಗೌಡ ಮರ್ಕಳ್ಳಿ, ಸುರೇಶ್, ಪ್ರವೀಣ ಶೆಟ್ಟಿ, ರಾಜಶೇಖರ್ ಗಿರ್ಜಿ, ರಾಜಶೇಖರ್ ಸಾಲೂರು ಮತ್ತಿತರರು ಹಾಜರಿದ್ದರು.