ಸಿದ್ಧಾರ್ಥ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ : ಹೇಗಾಯ್ತು ಸಾವು?

By Web Desk  |  First Published Aug 3, 2019, 8:10 AM IST

ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಸಾವು ಸಂಭವಿಸಿದ್ದು ಹೇಗೆಂದು ಮರಣೋತ್ತರ ತಾತ್ಕಾಲಿಕ ವರದಿ ಬಹಿರಂಗವಾಗಿದೆ. 


ಮಂಗಳೂರು [ಆ.03]: ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿ, ಬಳಿಕ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ, ‘ಕಾಫಿ ಡೇ’ ಕಂಪನಿಯ ಮಾಲಿಕ ವಿ.ಜಿ.ಸಿದ್ಧಾರ್ಥ ಅವರು ‘ನೀರಿಗೆ ಬಿದ್ದು ಉಸಿರುಗಟ್ಟಿಮೃತಪಟ್ಟಿದ್ದಾರೆಂದು’ ಮರಣೋತ್ತರ ಪರೀಕ್ಷೆಯ ಮಧ್ಯಂತರ ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಬಹುಕೋಟಿ ಮೌಲ್ಯದ ಕಂಪನಿಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವ ವಾದಕ್ಕೆ ಮತ್ತೊಂದು ಪುಷ್ಟಿಸಿಕ್ಕಂತಾಗಿದೆ.

ನೇತ್ರಾವತಿ ನದಿಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದ ಸಿದ್ಧಾರ್ಥ ಅವರ ಮೃತದೇಹವನ್ನು ಅಂದೇ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ಮಾಡಲಾಗಿತ್ತು. ಈಗ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ (ಪ್ರೊವಿಷನಲ್‌ ರಿಪೋರ್ಟ್‌)ಯನ್ನು ಆಸ್ಪತ್ರೆಯ ಅಧೀಕ್ಷಕರು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಸಿದ್ಧಾರ್ಥ ಅವರ ಸಾವಿಗೆ ಬೇರೆ ಯಾವುದೇ ಕಾರಣ ನಮೂದಿಸಿಲ್ಲ. ಕೇವಲ ನೀರಿಗೆ ಬಿದ್ದು ಉಸಿರುಗಟ್ಟಿಸಾವಿಗೀಡಾಗಿ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos

undefined

ಸಿದ್ಧಾರ್ಥ ಅವರದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಸಾಕಷ್ಟುಅನುಮಾನಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಪರೀಕ್ಷೆಗೆ ಅವರ ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸುವಂತೆ ಆಸ್ಪತ್ರೆ ವೈದ್ಯರನ್ನು ಕೋರಿದ್ದರು. ಅದರಂತೆ ಫೆäರೋನ್ಸಿಕ್‌ ತಜ್ಞರು ಸಿದ್ಧಾರ್ಥ ದೇಹದ ವಿವಿಧ ಭಾಗಗಳನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಅಲ್ಲಿಂದ 10 ದಿನದೊಳಗೆ ವರದಿ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಸಿದ್ಧಾರ್ಥ ಅವರು ಸೋಮವಾರ ರಾತ್ರಿ ನೇತ್ರಾವತಿ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ನಾಪತ್ತೆಯಾಗಿದ್ದರು. ಆ ಬಳಿಕ ಮೂವತ್ತಾರು ಗಂಟೆಗಳ ಬಳಿಕ ಅವರು ನಾಪತ್ತೆಯಾಗಿದ್ದ ನೇತ್ರಾವತಿ ಸೇತುವೆಯಿಂದ ನಾಲ್ಕು ಕಿ.ಮೀ ದೂರದ ಹೊಯ್ಗೆ ಬಜಾರ್‌ನ ನೇತ್ರಾವತಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಸಿದ್ಧಾರ್ಥ ಅವರದ್ದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದರೂ, ಆ ಕುರಿತು ಸಾಕಷ್ಟುಅನುಮಾನಗಳಿದ್ದ ಹಿನ್ನೆಲೆಯಲ್ಲಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್‌ ತಜ್ಞ ಡಾ.ಪ್ರತೀಕ್‌ ರಸ್ತೋಗಿ ಹಾಗೂ ವೆನ್ಲಾಕ್‌ ಆಸ್ಪತ್ರೆಯ ಫೊರೇನ್ಸಿಕ್‌ ವಿಭಾಗದ ಡಾ.ರಶ್ಮಿ ಮರಣೋತ್ತರ ಪರೀಕ್ಷೆ ನೆರವೇರಿಸಿದ್ದರು. ಇದೀಗ ಆ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬಂದಿದೆ. ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕರು ಈ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಸಿದ್ಧಾರ್ಥ ಆತ್ಮಹತ್ಯೆಯ ಕಾರಣದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ಪೊಲೀಸ್‌ ಮೂಲಗಳು ದೃಢಪಡಿಸಿವೆ.

click me!