
ಬೆಂಗಳೂರು: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ನಡೆಸಿರುವುದು ಬರೇ ಹತಾಶೆಯ ಕೃತ್ಯವಲ್ಲ, ಬದಲಾಗಿ ಅದರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ ಎಂಬ ಅನುಮಾನಗಳು ಹುಟ್ಟಿವೆ.
ಕೆಲವು ‘ಕಾಣದ ಕೈಗಳು’ ಉದ್ದೇಶ ಪೂರ್ವಕವಾಗಿ ಆರೋಪಿ ತೇಜ್ ರಾಜ್ ಶರ್ಮಾ ಮೂಲಕ ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ನಡೆಸಿವೆಯೋ? ಎಂಬ ಬಗ್ಗೆ ಸಿಸಿಬಿ ಪೊಲೀಸರರು ತನಿಖೆ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರಿಂದ ಆ ದುಷ್ಟಶಕ್ತಿಯ ಹುಡುಕಾಟ ನಡೆದಿದೆ. ಅದಕ್ಕಾಗಿ ಸಿಸಿಬಿ ಪೊಲೀಸರು ಮಂಪರು ಪರೀಕ್ಷೆಯ ಮೊರೆಹೋಗಿದ್ದಾರೆ.
ಈ ಹಿಂದೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್ಶೀಟ್ನ್ನು ಕಂಡು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಕೆಂಡಾಮಂಡಲರಾಗಿದ್ದರು. ಆರೋಪಿ ಹೇಳಿದ್ದನ್ನು ಮಾತ್ರ ದಾಖಲಿಸಿದ್ದೀರಿ, ಆತನ ಹಿಂದಿರುವ ದುಷ್ಟಶಕ್ತಿ ಹುಡುಕಿ ಎಂದಿದ್ದರು.
ಬಳಿಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಸೂಚನೆ ಮೇರೆಗೆ ಮರುತನಿಖೆಗೆ ಇಳಿದಿರುವ ಸಿಸಿಬಿ, ಎಷ್ಟೇ ಪ್ರಯತ್ನ ಪಟ್ಟರೂ ತನ್ನ ಹಿಂದಿನ ಶಕ್ತಿಯ ಬಗ್ಗೆ ಬಾಯ್ಬಿಡದ ತೇಜ್ರಾಜ್ ಶರ್ಮಾ ಬಾಯಿ ಬಿಡಿಸಲು ಮಂಪರು ಪರೀಕ್ಷೆಗೆ ಮುಂದಾಗಿದ್ದರು.
ಇದೀಗ ಕೋರ್ಟ್ ಅನುಮತಿ ಪಡೆದು, ಡಿಸಿಪಿ ಜೀನೆಂದ್ರ ಖಣಗಾವಿ ನೇತೃತ್ವದಲ್ಲಿ ಸಿಸಿಬಿ ತಂಡ ಅಹಮದಾಬಾದ್ಗೆ ತೆರಳಿದ್ದು, ಬುಧವಾರ ತೇಜ್ರಾಜ್ ಶರ್ಮಾನನ್ನು ಮಂಪರು ಪರೀಕ್ಷೆಗೊಳಪಡಿಸಲಿದೆ. ಮಂಪರು ಪರೀಕ್ಷೆಯ ನಂತರ ಹಲ್ಲೆಯ ಹಿಂದಿನ ಶಕ್ತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಕಳೆದ ಮಾ.7 ರಂದು, ವಿಧಾನಸೌಧ ಪಕ್ಕದಲ್ಲಿರುವ ಲೋಕಾಯುಕ್ತ ಕಟ್ಟಡದಲ್ಲಿರುವ ನ್ಯಾ. ಶೆಟ್ಟಿ ಕಚೇರಿಗೆ ಸಂದರ್ಶಕನ ಸೋಗಿನಲ್ಲಿ ತೆರಳಿ ಆರೋಪಿ ತೇಜ್ರಾಜ್ ಶರ್ಮಾ ಚಾಕುವಿನಿಂದ ಹಲ್ಲೆ ನಡೆಸಿದ್ದನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.