ಅಕ್ರಮ ಅದಿರು ರಫ್ತು: ಹಲವು ಪ್ರಕರಣಗಳಿಗೆ ಸಿಬಿಐ ಕ್ಲೀನ್ ಚಿಟ್

Published : Apr 17, 2017, 03:18 PM ISTUpdated : Apr 11, 2018, 12:50 PM IST
ಅಕ್ರಮ ಅದಿರು ರಫ್ತು: ಹಲವು ಪ್ರಕರಣಗಳಿಗೆ ಸಿಬಿಐ ಕ್ಲೀನ್ ಚಿಟ್

ಸಾರಾಂಶ

ಕೃಷ್ಣಪಟ್ಟಣಂ, ಗೋವಾ ಬಂದರು ಮೂಲಕ ಅದಿರು ರಫ್ತು ಪ್ರಕರಣಗಳಿಗೆ ಸಿಬಿಐ ಕ್ಲೀನ್​ ಚಿಟ್​; ಇದು ಸುವರ್ಣ ನ್ಯೂಸ್​ ಎಕ್ಸ್'​ಕ್ಲೂಸಿವ್​

ಬೆಂಗಳೂರು: ರಾಜ್ಯದಿಂದ ಕೃಷ್ಣಪಟ್ಟಣಂ ಸೇರಿದಂತೆ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಫ್ತು ಮಾಡಿರುವ ಪ್ರಕರಣಗಳ ಪೈಕಿ ಹಲವು ಪ್ರಕರಣಗಳನ್ನು ಸಿಬಿಐ ಮುಕ್ತಾಯಗೊಳಿಸಿರುವುದು ಬೆಳಕಿಗೆ ಬಂದಿವೆ. ಲೋಕಾಯುಕ್ತ ವರದಿ ಆಧರಿಸಿ ಹೆಚ್ಚಿನ ತನಿಖೆ ಕೈಗೊಳ್ಳಬೇಕಿದ್ದ ಸಿಬಿಐನ ಘಟಕಗಳು ಪ್ರಾಥಮಿಕ ತನಿಖೆಯಲ್ಲಿಯೇ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿರುವುದು ಅಚ್ಚರಿ ಮೂಡಿಸಿವೆ.

ಪ್ರಾಥಮಿಕ ತನಿಖೆ ನಡೆಸಿದ ನಂತರ ಪ್ರಕರಣಗಳನ್ನು ಮುಕ್ತಾಯಗೊಳಿಸಿರುವ ಸಿಬಿಐ, ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ ತಿಳಿಸಿದೆ. ಬಹು ಮುಖ್ಯ ಪ್ರಕರಣಗಳನ್ನು ಸಿಬಿಐ ಮುಕ್ತಾಯಗೊಳಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್​.ಕೆ.ಪಾಟೀಲ್​ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಕಳೆದ ಮಾರ್ಚ್​ನಲ್ಲಿ ನಡೆದಿರುವ 2 ಸಭೆಗಳಲ್ಲಿ ಈ ವಿಚಾರದ ಕುರಿತು ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ. ಕೃಷ್ಣಪಟ್ಟಣಂ ಬಂದರು ಮೂಲಕ ಅಕ್ರಮವಾಗಿ ಅದಿರು ಸಾಗಿಸಿರುವ ಪ್ರಕರಣಗಳನ್ನು 2 ತಿಂಗಳ ಹಿಂದೆಯೇ ಸಿಬಿಐ ಮುಕ್ತಾಯಗೊಳಿಸಿದೆ. ಕೃಷ್ಣಪಟ್ಟಣಂ ಬಂದರು ಮೂಲಕ 2006-07ರಿಂದ 2010ರವರೆಗೆ ಒಟ್ಟು 2.42 ಕೋಟಿ (2,45,29,926) ಮೆಟ್ರಿಕ್​ ಟನ್​ನಷ್ಟು ಕಬ್ಬಿಣ ಅದಿರು ರಫ್ತಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಒಟ್ಟು 71 ಮಂದಿ ರಫ್ತುದಾರರು ಕೃಷ್ಣಪಟ್ಟಣಂ ಬಂದರು ಮೂಲಕ  ಅದಿರನ್ನು ರಫ್ತು ಮಾಡಿದ್ದರು. ಡ್ರೀಮ್ ಲಾಜಿಸ್ಟಿಕ್ಸ್, ಎಸ್​.ಬಿ.ಲಾಜಿಸ್ಟಿಕ್ಸ್, ಅರಿಹಂತ್​ ಟೈಲ್ಸ್, ಮಾರ್ಬಲ್ಸ್, ಬಿಲಿಯನ್​ ವೆಲ್ತ್​ ಮಿನರಲ್ಸ್​, ಸೇಸಾ ಗೋವಾ, ಕಾವೇರಿ ಕಾಫಿ ಟ್ರೇಡರ್ಸ್​, ಸ್ವಸ್ತಿಕ್ ಸ್ಟೀಲ್ಸ್​, ಹೊಸಪೇಟೆ, ಐಎಲ್​'ಸಿ, ರಾಜ್​'ಮಹಲ್​ ಸಿಲ್ಕ್ಸ್, ಡೆಕ್ಕನ್ ಮೈನಿಂಗ್, ವೆಂಕಟೇಶ್ವರ ಎಕ್ಸ್, ಪೋರ್ಟ್ಸ್, ಭಾರತ್ ಮೈನ್ಸ್ ಮಿನರಲ್ಸ್, ಉಪಕಾರ್ ಮೈನಿಂಗ್, ಮಿನರಲ್ಸ್​ ಎಂಟರ್​ಪ್ರೈಸೆಸ್​,ವಿಭೂತಿಗುಡ್ಡ ಮೈನ್ಸ್ ಸೇರಿದಂತೆ ಒಟ್ಟು 71 ಮಂದಿ ರಫ್ತುದಾರ ಕಂಪನಿಗಳು ಅದಿರನ್ನು ರಫ್ತು ಮಾಡಿತ್ತು.

ಗೋವಾ ಸಿಬಿಐನಿಂದಲೂ ಪ್ರಕರಣ ಮುಕ್ತಾಯ:
2007-07ರಿಂದ 2010ರ ಅವಧಿಯಲ್ಲಿ 45,59,365 ಮೆಟ್ರಿಕ್​ ಟನ್​ ಪ್ರಮಾಣದಲ್ಲಿ ಕಬ್ಬಿಣ ಅದಿರುನ್ನು ರೈಲ್ವೇ ಮುಖಾಂತರ ಸಾಗಣಿಕೆ ಆಗಿತ್ತು. ಈ ಅಕ್ರಮದಲ್ಲಿ ಭಾಗಿ ಆಗಿರುವವರ ವಿರುದ್ಧ ಕ್ರಮ ಕೈಗೊಂಡು ದಂಡನೆ ವಿಧಿಸಿ ಸರ್ಕಾರಕ್ಕೆ ಉಂಟಾಗಿರುವ ನಷ್ಟ ವಸೂಲು ಮಾಡಲು ಲೋಕಾಯುಕ್ತ ವರದಿಯ 3ನೇ ಅಧ್ಯಾಯದಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಇದೇ ಅಧ್ಯಾಯಕ್ಕೆ ಸಂಬಂಧಪಟ್ಟ ಪ್ರಕರಣವನ್ನು ತನೀಖೆ ನಡೆಸಲು ಸಿಐಡಿಗೆ ವಹಿಸಲಾಗಿತ್ತು. ನಂತರ ಈ ಪ್ರಕರಣಗಳನ್ನು ಹೆಚ್ಚಿನ ತನಿಖೆ ನಡೆಸಲು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಗೋವಾ ಶಾಖೆಗೆ ವಹಿಸಲಾಗಿತ್ತು.  ಈ ಪ್ರಕರಣಗಳ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ ಎಂದು ಗೋವಾ ಸಿಬಿಐ ಮುಖ್ಯಸ್ಥರು 2015ರ ಏಪ್ರಿಲ್​ 16ರಂದು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದ್ದರು.

ಆದರೆ, 2016ರ ಡಿಸೆಂಬರ್​ 29ರಂದು ಸಿಬಿಐ ರಾಜ್ಯ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿತ್ತು. § ಕರ್ನಾಟಕ ಮೂಲದ ಕಬ್ಬಿಣ ಅದಿರನ್ನು ಗೋವಾ ರಾಜ್ಯದ ಪಣಜಿ, ಮರ್ಮಗೋವಾ ಬಂದರು ಮೂಲಕ ರಫ್ತು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ತನಿಖೆ ಪೂರ್ಣಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಕಾನೂನಾತ್ಮಕ ಪರಾಮರ್ಶೆ ನಡೆಸಿದೆ. ಪ್ರಕರಣವನ್ನು ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಯಾವುದೇ ಸಮರ್ಥನೆಗಳು ಕಂಡು ಬರುತ್ತಿಲ್ಲ. ಹೀಗಾಗಿ ಸಿಬಿಐ ತನಿಖಾ ಸಂಸ್ಥೆಯು ಈ ಪೂರ್ವಭಾವಿ ತನಿಖೆ ಪ್ರಕರಣಗಳನ್ನು ಮುಕ್ತಾಯಗೊಳಿಸಲು ನಿರ್ಣಯಿಸಿದೆ§ ಎಂದು ಸಿಬಿಐ ಗೋವಾ ಶಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಗೋವಾದಲ್ಲಿ ಮಿಶ್ರಣ:
ರಾಜ್ಯದಿಂದ ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿರುವ ಅದಿರನ್ನು ಅಲ್ಲಿನ ಅದಿರಿನ ಜೊತೆ ಮಿಶ್ರಣ ಮಾಡಲಾಗುತ್ತದೆ. ಕರ್ನಾಟಕದ ಅದಿರು ಅತ್ಯುತ್ತಮ ಗುಣಮಟ್ಟ ಹೊಂದಿರುವುದರಿಂದ ಅದನ್ನು ಗೋವಾದ ಅದಿರಿಗೆ ಮಿಶ್ರಣ ಮಾಡಿ ಮಾರುಕಟ್ಟೆಯ ಬೇಡಿಕೆಯ ಗುಣಮಟ್ಟಕ್ಕೆ ಹೊಂದಿಸುವ ತಂತ್ರವನ್ನು ಅಕ್ರಮದಲ್ಲಿ ತೊಡಗಿರುವವರು ರೂಢಿಸಿಕೊಂಡಿದ್ದರು ಎಂಬುದನ್ನು ಲೋಕಾಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದರು.

2009ರಲ್ಲೇ ಅಧಿಕ:
ತನಿಖೆಯ ವ್ಯಾಪ್ತಿಗೆ ಒಳಪಟ್ಟ ಐದು ವರ್ಷಗಳ ಅವಧಿಯಲ್ಲಿ 2009-10ರಲ್ಲೇ ಅತ್ಯಧಿಕ ಅದಿರು ರಾಜ್ಯದಿಂದ ಅಕ್ರಮವಾಗಿ ವಿದೇಶಕ್ಕೆ ತಲುಪಿತ್ತು. 2009ರಲ್ಲಿ 1.27 ಕೋಟಿ ಟನ್ ಅದಿರು ಕಳ್ಳ ಸಾಗಣೆ ನಡೆದಿದೆ. 2008ರಲ್ಲಿ 53 ಲಕ್ಷ ಟನ್ ಅಕ್ರಮವಾಗಿ ಹೊರಹೋಗಿತ್ತು. 2010ರ ಡಿಸೆಂಬರ್‌ವರೆಗೆ 48 ಲಕ್ಷ ಟನ್ ಅಕ್ರಮವಾಗಿ ರಫ್ತು ಮಾಡಲಾಗಿತ್ತು  ಎಂಬುದನ್ನು ಲೋಕಾಯುಕ್ತರು ಪತ್ತೆಹಚ್ಚಿದ್ದರು.

- ಜಿ. ಮಹಾಂತೇಶ್​, ಸುವರ್ಣನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ