ರಯಾನ್ ಶಾಲಾ ವಿದ್ಯಾರ್ಥಿ ಕೊಲೆ ಪ್ರಕರಣ: 11ನೇ ಕ್ಲಾಸ್ ವಿದ್ಯಾರ್ಥಿ ಬಂಧನ

By Suvarna Web DeskFirst Published Nov 8, 2017, 11:45 AM IST
Highlights

ಆರೋಪಿಯು ಅಪ್ರಾಪ್ತನಾಗಿದ್ದರೂ ಘಟನೆಯ ತೀವ್ರತೆಯನ್ನು ಗಮನಿಸಿ ಆತನನ್ನು ಮಾಮೂಲಿಯ ಅಪರಾಧ ಪ್ರಕರಣದಂತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಬಾಲಾಪರಾಧ ನ್ಯಾಯ ಮಂಡಳಿಯು ಮಧ್ಯಾಹ್ನ 2ಗಂಟೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ನವದೆಹಲಿ(ನ. 08): ಗುಡಗಾಂವ್'ನ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್'ನ ಆವರಣದಲ್ಲಿ ನಡೆದಿದ್ದ 7 ವರ್ಷದ ಬಾಲಕ ಪ್ರದ್ಯುಮನ್'ನ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನಿನ್ನೆ ರಾತ್ರಿ ಅದೇ ಶಾಲೆಯ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೆಪ್ಟಂಬರ್ 1ರಂದು ರಯಾನ್ ಇಂಟರ್ನ್ಯಾಷನ್ ಸ್ಕೂಲ್'ನ ವಾಷ್'ರೂಮ್'ನಲ್ಲಿ ಬೆಳಗ್ಗೆ ಗಂಟೆಗೆ ಪ್ರದ್ಯುಮನ್ ಠಾಕೂರ್'ನ ಶವ ಪತ್ತೆಯಾಗಿತ್ತು. ಆತನ ಗಂಟಲು ಸೀಳಲಾಗಿತ್ತು. ಶವದ ಪಕ್ಕದಲ್ಲೇ ಚಾಕು ಕೂಡ ಇತ್ತು. 11ನೇ ಕ್ಲಾಸ್ ವಿದ್ಯಾರ್ಥಿಯು ವಾಷ್'ರೂಮ್ ಬಳಸಲು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶವವನ್ನು ಮೊದಲು ನೋಡಿ ಮಾಹಿತಿ ನೀಡಿದ್ದ ಆ ವಿದ್ಯಾರ್ಥಿಯೇ ಈಗ ಆರೋಪಿ ಎನಿಸಿದ್ದಾನೆ. ಸಿಬಿಐ ಬಂಧಿಸಿರುವುದು ಇದೇ ಹುಡುಗನನ್ನೇ.

ಘಟನೆ ನಡೆದಾಗ ಪೊಲೀಸರು ಇದೊಂದು ಲೈಂಗಿಕ ಹಲ್ಲೆ ಮತ್ತು ಕೊಲೆ ಪ್ರಕರಣವೆಂದು ಭಾವಿಸಿದ್ದರು. ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಎಂಬಾತನ ಮೇಲೆ ಶಂಕೆ ಇರಿಸಲಾಗಿತ್ತು. ಅಶೋಕ್ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆಂದೂ ಪೊಲೀಸರು ಹೇಳಿಕೊಂಡಿದ್ದರು. ಆದರೆ, ಅಶೋಕ್ ಕುಟುಂಬದವರು ತೀವ್ರ ಪ್ರತಿಭಟನೆ ಮಾಡಿದ್ದರು. ಪೋಸ್ಟ್'ಮಾರ್ಟಮ್ ವರದಿ ಪ್ರಕಾರ, ಬಾಲಕನ ಮೇಲೆ ಯಾವುದೇ ಲೈಂಗಿಕ ಹಲ್ಲೆಯಾಗಿರಲಿಲ್ಲ.

ಪ್ರಕರಣದ ಗಂಭೀರತೆ ಅರಿವಿಗೆ ಬಂದ ಬಳಿಕ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ತನಿಖೆಯನ್ನು ಸಿಬಿಐಗೆ ವಹಿಸಿದರು. ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಆರೋಪಿಯು ಪ್ರದ್ಯುಮನ್ ಠಾಕೂರ್ ಜೊತೆ ವಾಷ್'ರೂಮ್'ಗೆ ಹೋದಾಗಿನ ಚಲನವಲಗಳು ಸಿಬಿಐಗೆ ಅನುಮಾನ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಬಂಧಿಸಲಾಗಿದೆ.

ಆರೋಪಿಯು ಅಪ್ರಾಪ್ತನಾಗಿದ್ದರೂ ಘಟನೆಯ ತೀವ್ರತೆಯನ್ನು ಗಮನಿಸಿ ಆತನನ್ನು ಮಾಮೂಲಿಯ ಅಪರಾಧ ಪ್ರಕರಣದಂತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಬಾಲಾಪರಾಧ ನ್ಯಾಯ ಮಂಡಳಿಯು ಮಧ್ಯಾಹ್ನ 2ಗಂಟೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಪರೀಕ್ಷೆ ಮುಂದೂಡಿಸಬೇಕೆಂದಿದ್ದ ಆರೋಪಿ:
ಬಂಧಿತ ಕ್ಲಾಸ್ 11 ವಿದ್ಯಾರ್ಥಿಯ ವಿಚಾರಣೆ ನಡೆಸಿದಾಗ ಸಿಬಿಐ ಅಧಿಕಾರಿಗಳಿಗೆ ಕೆಲವೊಂದಿಷ್ಟು ಕುತೂಹಲಕಾರಿ ಮಾಹಿತಿ ಸಿಕ್ಕಿದೆ. ಶಾಲೆಯ ಪರೀಕ್ಷೆ ಮತ್ತು ಪೇರೆಂಟ್ಸ್-ಟೀಚರ್ಸ್ ಮೀಟಿಂಗ್'ಗಳನ್ನು ಮುಂದೂಡುವ ಸಲುವಾಗಿ ಆರೋಪಿಯು 7 ವರ್ಷದ ಬಾಲಕನನ್ನು ಹತ್ಯೆಗೈದಿರುತ್ತಾನೆ.

click me!