ಕಾವೇರಿ ಕೂಗು ಅಭಿಯಾನಕ್ಕೆ ಕೊಯಮತ್ತೂರಲ್ಲಿ ಚಾಲನೆ

Published : Aug 03, 2019, 07:46 AM IST
ಕಾವೇರಿ ಕೂಗು ಅಭಿಯಾನಕ್ಕೆ ಕೊಯಮತ್ತೂರಲ್ಲಿ ಚಾಲನೆ

ಸಾರಾಂಶ

ಈಶಾ ಫೌಂಡೇಶನ್‌ ವತಿಯಿಂದ ಕಾವೇರಿ ನದಿ ಪುನರುಜ್ಜೀವನಗೊಳಿಸುವ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ‘ಕಾವೇರಿ ಕೂಗು ಅಭಿಯಾನ’ದ ರಾರ‍ಯಲಿಗೆ ಕೊಯಮತ್ತೂರಲ್ಲಿ ಚಾಲನೆ ನೀಡಲಾಗಿದೆ.

ಬೆಂಗಳೂರು [ಆ.03]:  ಈಶಾ ಫೌಂಡೇಶನ್‌ ವತಿಯಿಂದ ಕಾವೇರಿ ನದಿ ಪುನರುಜ್ಜೀವನಗೊಳಿಸುವ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ‘ಕಾವೇರಿ ಕೂಗು ಅಭಿಯಾನ’ದ ರಾರ‍ಯಲಿಗೆ ಕೊಯಮತ್ತೂರು ಸಮೀಪದ ವೆಳ್ಳಯ್ಯನಗಿರಿ ಬೆಟ್ಟದ ತಪ್ಪಲಿನ ಆದಿಯೋಗಿ ಪ್ರತಿಮೆ ಬಳಿ ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಚಾಲನೆ ನೀಡಿದರು.

ಈ ರಾರ‍ಯಲಿಯು ತಮಿಳುನಾಡು ಮತ್ತು ಕರ್ನಾಟಕದ 28 ಜಿಲ್ಲೆಗಳಲ್ಲಿ ಸಂಚರಿಸಿ ಕಾವೇರಿ ನದಿಯ ಬಗ್ಗೆ ಅರಿವು ಮೂಡಿಸಲಿದೆ. ಒಂದು ತಿಂಗಳ ಕಾಲ ನಡೆಯುವ ಈ ರಾರ‍ಯಲಿ ಮುಖಾಂತರ ಎರಡೂ ರಾಜ್ಯಗಳ ಸಾವಿರಾರು ಕೃಷಿಕರನ್ನು ತಲುಪುವ ನಿರೀಕ್ಷೆಯಿದೆ. ರಾರ‍ಯಲಿ ವೇಳೆ ವೀಡಿಯೋ ತುಣುಕುಗಳು, ಮುದ್ರಿತ ಪ್ರಚಾರ ಸಾಮಗ್ರಿ ಮತ್ತು ಮುಖಾಮುಖಿ ಮಾತುಕತೆಯ ಮೂಲಕ ಕೃಷಿ ಅರಣ್ಯಗಳಿಂದಾಗುವ ಹಣಕಾಸಿನ ಪ್ರಯೋಜನ ಹಾಗೂ ಪರಿಸರಕ್ಕಾಗುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ರಾರ‍ಯಲಿಯ ಮಾರ್ಗದುದ್ದಕ್ಕೂ ಗ್ರಾಮ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈಶಾ ಔಟ್‌ ರೀಚ್‌ನಲ್ಲಿ ಕೆಲಸ ಮಾಡುವ ಕ್ಷೇತ್ರ ಮಟ್ಟದ ಕೆಲಸಗಾರರು ಮತ್ತು ಕೃಷಿ ಅರಣ್ಯ ಕುರಿತ ತಜ್ಞರು ತಮ್ಮ ಅನುಭವ, ನೈಪುಣ್ಯತೆ ಮತ್ತು ಈ ಲಾಭದಾಯಕ ಮಾದರಿ ಅಳವಡಿಸಿಕೊಂಡಿರುವ ಕೃಷಿಕರ ಯಶೋಗಾಥೆಗಳನ್ನು ರೈತರಿಗೆ ತಿಳಿಸಿಕೊಡಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸದ್ಗುರು ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿಯಿಂದ ಬೈಕ್‌ ರಾರ‍ಯಲಿಯ ನೇತೃತ್ವ ವಹಿಸಲಿದ್ದಾರೆ. ತಲಕಾವೇರಿಯಿಂದ ಹೊರಟು ಕಾವೇರಿ ನದಿ ತಮಿಳುನಾಡಿನಲ್ಲಿ ಸಮುದ್ರ ಸೇರುವ ತಿರುವಾವೂರು ವರೆಗೆ ಬೈಕ್‌ ಸವಾರಿ ಮಾಡಲಿದ್ದಾರೆ. ರಾರ‍ಯಲಿಯಲ್ಲಿ ಸದ್ಗುರು ಜತೆಗೆ ನೂರಾರು ಮಂದಿ ಬೈಕ್‌ ಸವಾರರು ಸಾಥ್‌ ನೀಡಲಿದ್ದಾರೆ.

ಕೃಷಿ ಅರಣ್ಯ ಮಾದರಿಯ ಕೃಷಿಯು ವಾಣಿಜ್ಯಾತ್ಮಕವಾಗಿ ಲಾಭದಾಯಕ ಎಂದು ಸಾಬೀತಾಗಿದೆ. ಕಾವೇರಿ ಕೂಗು ಅಭಿಯಾನವು ಈ ನಾವೀನ್ಯ ಮಾದರಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲಿದೆ. ಈ ಕೃಷಿ ಮಾದರಿಯು ಮಣ್ಣಿನ ಫಲವತ್ತತೆ ಹೆಚ್ಚಿಸಿ, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸಹಕಾರಿಯಾಗಿದೆ. ಅಂತೆಯೆ ಐದರಿಂದ ಎಂಟು ವರ್ಷಗಳ ಅವಧಿಯಲ್ಲಿ ಕೃಷಿಕರ ಆರ್ಥಿಕ ಸ್ಥಿತಿ ಸುಧಾರಿಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಈ ನಿರಂತರ ಕಾರ್ಯದಿಂದ ನದಿಯಲ್ಲಿ ನೀರಿನ ಹರಿವು ಪುನಃ ಸ್ಥಾಪಿತವಾಗುವ ನೀರಿಕ್ಷೆಯಿದೆ ಎಂದು ಈಶಾ ಫೌಂಡೇಶನ್‌ ತಿಳಿಸಿದೆ.

ರಾರ‍ಯಲಿ ಚಾಲನೆ ವೇಳೆ ತಮಿಳುನಾಡಿನ ಬಿಜೆಪಿ ಕಾರ್ಯದರ್ಶಿ ವಣತಿ ಶ್ರೀನಿವಾಸನ್‌, ಪೀಪಲ್ಸ್‌ ನ್ಯಾಷನಲ್‌ ಪಾರ್ಟಿ ಆಫ್‌ ಕೊಂಗುನಾಡು ಕಾರ್ಯದರ್ಶಿ ಈ.ಈ.ಆರ್‌. ಈಶ್ಚರನ್‌, ನ್ಯೂ ತಮಿಳುನಾಡು ಪಾರ್ಟಿ ಸಂಸ್ಥಾಪಕ ಡಾ.ಕೃಷ್ಣಸ್ವಾಮಿ, ನಟಿ ರಾಧಿಕಾ ಶರತ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!